ಇತ್ತೀಚಿನ ಸುದ್ದಿ
ನಂಜನಗೂಡು: ಮನೆ ಮೇಲೆ ಮರ ಬಿದ್ದು ಸಂಪೂರ್ಣ ಜಖಂ; ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಡ ಕುಟುಂಬ ಪಾರು
16/05/2024, 22:45

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಿಂದಾಗಿ ಹಳೆಯ ಬಾರಿ ಗಾತ್ರದ ಅರಳಿ ಮರವೊಂದು ಮನೆ ಮೇಲೆ ಬಿದ್ದು ಮನೆ ಸಂಪೂರ್ಣ ನಜ್ಜು ಗುಜ್ಜಾಗಿದ್ದು ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಬಡ ಕುಟುಂಬವೊಂದು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಂಜನಗೂಡು ತಾಲೂಕಿನ ಅರಿಯೂರು ಗ್ರಾಮದಲ್ಲಿ ನಡೆದಿದೆ.
ಮಳೆ ಗಾಳಿಯಿಂದಾಗಿ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಇದ್ದಕ್ಕಿದ್ದಂತೆ ಮರದ ಬಾರಿ ಗಾತ್ರದ ಕೊಂಬೆಯೊಂದು ಮನೆಯ ಮೇಲೆ ಬೀಳುತ್ತಿದ್ದಂತೆ ಇಬ್ಬರು ಮಕ್ಕಳು ಸೇರಿದಂತೆ ವಯೋವೃದ್ದಾದಿಯಾಗಿ ಮನೆಯಿಂದ ಹೊರ ಬಂದು ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಆದರೆ ಮನೆ ಮಾತ್ರ ಸಂಪೂರ್ಣ ಜಖಂ ಗೊಂಡಿದೆ.
ಸುಮಾರು 90 ವರ್ಷದ ವಯೋ ವೃದ್ಧ ವೆಂಕಟಯ್ಯ ಆತನ ಪತ್ನಿ ಹಾಗೂ ಮೊಮ್ಮಗಳಾದ ಪದ್ಮ ಮತ್ತು ಅವಳ ಎರಡು ಮಕ್ಕಳು ಮನೆಯಲ್ಲಿ ವಾಸವಾಗಿದ್ದರು.
ಕಡು ಬಡವರಾದ ವೆಂಕಟಯ್ಯ ಕುಟುಂಬ ಒಂದು ಸಣ್ಣ ಮನೆಯಲ್ಲಿ ವಾಸವಿರುತ್ತಾರೆ. ಅದೇ ಸಣ್ಣ ಮನೆಯಲ್ಲಿ ಮೊಮ್ಮಗಳು ಪದ್ಮ ಜೀವನೋಪಾಯಕ್ಕಾಗಿ ಸಾಲ ಸೋಲ ಮಾಡಿ ಒಂದು ಪುಟ್ಟ ಅಂಗಡಿಯನ್ನು ಸಹ ನಡೆಸುತ್ತಿರುತ್ತಾಳೆ.
ಅಂಗಡಿಯಲ್ಲಿ ಜೆರಾಕ್ಸ್ ಮಿಷನ್ , ಹೊಲಿಗೆ ಯತ್ರ, ಲ್ಯಾಪ್ಟಾಪ್ ಸೇರಿದಂತೆ ಅಂಗಡಿಯಲ್ಲಿದ್ದ ವಸ್ತುಗಳು ಸಹ ಸಂಪೂರ್ಣ ನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಈ ಘಟನೆಯಿಂದಾಗಿ ಮಕ್ಕಳು ಸೇರಿದಂತೆ ವಯೋವೃದ್ಧರು ಬೀದಿಗೆ ಬಿದ್ದಿದ್ದಾರೆ.
ಮರ ತೆಗೆಸುವಂತೆ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಮರ ತೆಗೆಸದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ದುರ್ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬಸ್ಥರು ಮಾತನಾಡಿ ಮರ ತೆಗೆಸುವಂತೆ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಇಂದು ಮರ ನಮ್ಮ ಮನೆ ಮೇಲೆ ಬಿದ್ದು ಮನೆ ಹಾಗೂ ಅಂಗಡಿಯಲ್ಲಿದ್ದ ಎಲ್ಲಾ ವಸ್ತುಗಳು ಸಂಪೂರ್ಣ ನಾಶವಾಗಿದೆ. ಇದರಿಂದಾಗಿ ಈಗ ಬೀದಿಗೆ ಬಿದ್ದು ನಮಗೆ ದಿಕ್ಕು ತೋಚದಂತಾಗಿ ನಮಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಒಂದೇ ದಾರಿ ಎಂದು ತಮ್ಮ ಅಳಲು ತೋಡಿಕೊಂಡರು.