ಇತ್ತೀಚಿನ ಸುದ್ದಿ
ಸ್ಪರ್ಧೆ ಕುರಿತು ಬಿಜೆಪಿ ಮುಖಂಡರ ಬಳಿ ಹಿಂದೆಯೇ ಹೇಳಿದ್ದೆ; ಇದು ಬಂಡಾಯ ಸ್ಪರ್ಧೆಯಲ್ಲ, ಕರಾವಳಿಗರ ಸ್ವಾಭಿಮಾನ: ಹರೀಶ್ ಆಚಾರ್ಯ
14/05/2024, 20:16
ಮಂಗಳೂರು(reporterkarnataka.com): ನೈಋತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದಲ್ಲಿ
ನಾನು ಬಂಡಾಯ, ಪಕ್ಷೇತರನಾಗಿ ಸ್ಪರ್ಧಿಸುತ್ತಿಲ್ಲ, ಬದಲಿಗೆ ‘ಅಭ್ಯರ್ಥಿ’ಯಾಗಿ ಸ್ಪರ್ಧಿಸುತ್ತಿದ್ದೇನೆ. ನನ್ನ ಸ್ಪರ್ಧೆಯ ಕುರಿತು ಬಿಜೆಪಿ ಹಿರಿಯ ಮುಖಂಡರ ಬಳಿ ಈ ಹಿಂದೆಯೇ ಹೇಳಿದ್ದೆ ಎಂದು ಮಂಗಳೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಎಸ್.ಆರ್. ಹರೀಶ್ ಆಚಾರ್ಯ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಕರಾವಳಿಯ ನಾನಾ ಕಡೆಗಳಿಗೆ ಪ್ರವಾಸ ಮಾಡಿ, ಶಿಕ್ಷಣ ಕ್ಷೇತ್ರದ ಸಮಸ್ಯೆಯ ಬಗ್ಗೆ ತಿಳಿದುಕೊಂಡಿದ್ದೇನೆ. ಆದರೆ ಈ ಬಾರಿ ಕರಾವಳಿ ಜಿಲ್ಲೆಯನ್ನು ಕಡೆಗಣಿಸಲಾಗಿದೆ. ಯಾವುದೇ ರಾಷ್ಟ್ರೀಯ ಪಕ್ಷಗಳು ಕರಾವಳಿ ಜಿಲ್ಲೆಗಳಲ್ಲಿ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳಿಗೆ ಪ್ರಾತಿನಿಧ್ಯ ನೀಡದೆ ನಿರ್ಲಕ್ಷೃ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರ ಧ್ವನಿಯಾಗಿ ಕರಾವಳಿಯ ಸ್ವಾಭಿಮಾನದ ಹಿನ್ನಲೆಯಲ್ಲಿ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಸರಕಾರದ ಮುಂದಿಡಬೇಕಿದೆ. ಶಿಕ್ಷಕರ ಧ್ವನಿಯಾಗಿ ಕೆಲಸ ನಿರ್ವಹಿಸಬೇಕು ಎಂಬ ಉದ್ದೇಶಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಮೇ 15ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ನಾನು ಎಬಿವಿಪಿ, ಸಹಕಾರ ಭಾರತಿ ಹಿನ್ನೆಲೆಯಿಂದ ಬಂದವನು ಎಂದು ಅವರು ಹೇಳಿದರು.
ಶಿಕ್ಷಕರೆಲ್ಲರೂ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾರೆ. ಕಳೆದ ಸುಮಾರು 20 ವರ್ಷಗಳಿಂದ ಈ ಭಾಗದಲ್ಲಿ ವಿದ್ಯಾರ್ಥಿ ಮುಖಂಡನಾಗಿ, ಅಧ್ಯಾಪಕರ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯನಾಗಿಯೂ ಸೇವೆ ಸಲ್ಲಿಸಿ, ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಕ ಸಮುದಾಯದ ಹಲವಾರು ಸಮಸ್ಯೆಗಳಿಗೆ ಧ್ವನಿಯಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಈ ಮೂಲಕ ಶಿಕ್ಷಕ ಸಮುದಾಯಕ್ಕೆ ಸೂಕ್ತ ನಾಯಕತ್ವವನ್ನು ನೀಡುವ ಪ್ರಯತ್ನವನ್ನು ಮಾಡಿದ್ದೇನೆ ಎಂದರು.
ಮುಖಂಡರಾದ ಡಾ.ರಾಜಮೋಹನ್ ರಾವ್, ನಿತೀಶ್ ಸಾಲ್ಯಾನ್, ಜಿತಿನ್ ಜಿಜೋ, ಜ್ಯೋತಿ ರೈ ಉಪಸ್ಥಿತರಿದ್ದರು.














