ಇತ್ತೀಚಿನ ಸುದ್ದಿ
ಉದ್ಯೋಗ ಸೃಷ್ಟಿ, ನಿರುದ್ಯೋಗದಿಂದ ರಕ್ಷಣೆ ಹಾಗೂ ಸ್ಥಳೀಯರಿಗೆ ಉದ್ಯೋಗ ಆದ್ಯತೆಗೆ ಒತ್ತಾಯಿಸಿ ಡಿವೈಎಫ್ಐ ಪ್ರತಿಭಟನೆ
17/08/2021, 20:38
ಮಂಗಳೂರು(reporterkarnataka.com): ನಿರುದ್ಯೋಗದ ಪ್ರಮಾಣ ವಿಪರೀತವಾಗಿ ಏರಿಕೆಯಾಗುತ್ತಿದ್ದು, ಶಾಲಾ ಕಾಲೇಜುಗಳು ನಿರುದ್ಯೋಗಿಗಳನ್ನು ಸೃಷ್ಟಿ ಮಾಡುವ ಕಾರ್ಖಾನೆಗಳಾಗಿ ಪರಿವರ್ತನೆಗೊಳ್ಳುತ್ತಿದೆ. ದೇಶ ಸ್ವಾತಂತ್ರ್ಯಗೊಂಡು ಇಷ್ಟು ವರುಷಗಳಲ್ಲಿ ಈ ಮಟ್ಟಕ್ಕೆ ನಿರುದ್ಯೋಗ ಪ್ರಮಾಣ ಏರಿಕೆಯಾಗಿರುವುದು ಇದೇ ಮೊದಲು. ಇದು ಬಿಜೆಪಿ ಪಕ್ಷದ ಆಡಳಿತ ನೀತಿಯ ಪರಿಣಾಮ ಅನ್ನೋದು ನಾವು ಅರ್ಥ ಮಾಡಿಕೊಳ್ಳಬೇಕು ,ಪ್ರಧಾನಿ ನರೇಂದ್ರ ಮೋದಿ ವರುಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆಂದ ಭರವಸೆ ಈವರೆಗೂ ಈಡೇರಿಸಲು ಸಾಧ್ಯವಾಗಿಲ್ಲ ಎಂದು ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷಸುನೀಲ್ ಕುಮಾರ್ ಬಜಾಲ್ ಹೇಳಿದರು.
ಡಿವೈಎಫ್ಐ ಮಂಗಳೂರು ನಗರ ಸಮಿತಿ ಆಯೋಜಿಸಿದ ಉದ್ಯೋಗ ಸೃಷ್ಟಿಸಿ ನಿರುದ್ಯೋಗದಿಂದ ರಕ್ಷಿಸಿ ಸ್ಥಳೀಯರಿಗೆ ಉದ್ಯೋಗ ಆದ್ಯತೆ ನೀಡಿ, ಸರೋಜಿನಿ ಮಹಿಷಿ ವರದಿ ಜಾರಿಮಾಡಬೇಕೆಂದು ಒತ್ತಾಯಿಸಿ
ನಗರದ ಕ್ಲಾಕ್ ಟವರ್ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಡಿವೈಎಫ್ಐ ಸಂಘಟನೆ ಸ್ಥಾಪನೆಗೊಂಡ ದಿನದಿಂದ ಯುವಜನರಿಗೆ ಉದ್ಯೋಗ ಕೊಡಿ ಇಲ್ಲವೇ ನಿರುದ್ಯೋಗ ಭತ್ಯೆಕೊಡಿ ಎಂದು ಪ್ರಮುಖ ಬೇಡಿಕೆಯನ್ನಿಟ್ಟು ಒತ್ತಾಯಿಸುತ್ತಾ ಬಂದಿದೆ. ಇವತ್ತು ಕೊರೋನಾ ಕಾಲದಲ್ಲಿ ನಿರುದ್ಯೋಗದ ಪ್ರಮಾಣ ಭೀಕರ ಸ್ಥಿತಿಗೆ ತಲುಪಿದೆ ಇದಕ್ಕೆ ಕೋರೋನಾ ಒಂದೇ ಕಾರಣ ಅಲ್ಲ, ಈ ದೇಶದ ಆರ್ಥಿಕ ನೀತಿಯೇ ಪ್ರಮುಖ ಕಾರಣ. ಕೊರೋನಾ ಬರುವ ಮೊದಲೇ ನೋಟು ಬ್ಯಾನ್ ಸಂದರ್ಭದಲ್ಲೇ ಬಹಳಷ್ಟು ಸಣ್ಣ ಪುಟ್ಟ ಕೈಗಾರಿಕೆಗಳು ಬೀಗ ಹಾಕಿವೆ. ಬಹಳಷ್ಟು ಉದ್ಯೋಗವನ್ನು ಜನ ಕಳೆದುಕೊಂಡು ಕೋರೋನಾ ಕಾಲಕ್ಕೆ ಅದು ಗಂಭೀರ ಸ್ವರೂಪಕ್ಕೆ ತಲುಪಿದೆ. ಸರಕಾರದ ಉದ್ಯೋಗಗಳೇ ಬಹಳಷ್ಟು ಖಾಲಿ ಬಿದ್ದಿವೆ. ರಾಜ್ಯದಲ್ಲಿ 2.50 ಲಕ್ಷಕ್ಕೂ ಮಿಕ್ಕಿ ಸರಕಾರಿ ಉದ್ಯೋಗ ಖಾಲಿ ಇವೆ. ದ.ಕ ಜಿಲ್ಲೆಯೊಂದರಲ್ಲೇ ಬಹುತೇಕ 13000 ಕ್ಕೂ ಮಿಕ್ಕಿ ಸರಕಾರದ ವಿವಿಧ ಇಲಾಖೆಯಲ್ಲಿ ಪ್ರಮುಖ ಹುದ್ದೆಗಳು ಖಾಲಿ ಬಿದ್ದಿವೆ. ಜಿಲ್ಲೆಯಲ್ಲಿರುವ ಸಾರ್ವಜನಿಕ ರಂಗದ, ಖಾಸಗೀ ರಂಗದ ಕೈಗಾರಿಕೆಗಳಲ್ಲಿರುವ ಉದ್ಯೋಗಗಳಿಂದ ಸ್ಥಳೀಯ ಯುವಜನರನ್ನು ವಂಚಿಸಲಾಗಿದೆ. ನಿರುದ್ಯೋಗಿ ಯುವನಜತೆಗೆ ಉದ್ಯೋಗ ದೊರಕಿಸಿ ಕೊಡಬೇಕಾಗಿದ್ದ ವಿನಿಮಯ ಕೇಂದ್ರದ ಉದ್ಯೋಗಗಳೇ ಖಾಲಿ ಬಿದ್ದಿವೆ ಅನ್ನೋದು ದುರಂತ. ದ.ಕ ಜಿಲ್ಲೆಯ ಉದ್ಯೋಗ ವಿನಿಮಯ ಕೇಂದ್ರದಲ್ಲಿರುವ ಒಟ್ಟು 7 ಹುದ್ದೆಗಳಲ್ಲಿ 5 ಹುದ್ದೆಗಳು ಖಾಲಿ ಬಿದ್ದಿವೆ. ಹಾಗಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸ ಮೊದಲು ಇಲ್ಲಿಂದಲ್ಲೇ ನಡೆಯಬೇಕು ಎಂದು ಒತ್ತಾಯಿಸಿದರು.
ಡಿವೈಎಫ್ಐ ಜಿಲ್ಲಾ ಮುಖಂಡ ಮನೋಜ್ ವಾಮಂಜೂರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಡಿವೈಎಫ್ಐ ಮಂಗಳೂರು ನಗರ ಅಧ್ಯಕ್ಷ ನವೀನ್ ಕೊಂಚಾಡಿ, ಕಾರ್ಯದರ್ಶಿ ಸಾಧಿಕ್ ಕಣ್ಣೂರು, ಹನೀಫ್ ಬೆಂಗರೆ, ಕೃಷ್ಣ ತಣ್ಣೀರುಬಾವಿ, ಅಸುಂತ ಡಿಸೋಜ, ಪ್ರಮೀಳಾ ದೇವಾಡಿಗ, ವೆಂಕಟೇಶ್, ಲೋಕೇಶ್, ನಾಸಿರ್, ಮುಂತಾದವರು ಉಪಸ್ಥಿತರಿದ್ದರು.