ಇತ್ತೀಚಿನ ಸುದ್ದಿ
ಮಂಗಳೂರು ಕೆನರಾ ಕಾಲೇಜಿನಲ್ಲಿ ಸ್ವಚ್ಛತಾ ಶಿಬಿರ ಮತ್ತು ಮತದಾರರ ಜಾಗೃತಿ ಅಭಿಯಾನ
02/04/2024, 13:07
ಮಂಗಳೂರು(reporterkarnataka.com): ಭಾರತ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯದ ನಿರ್ದೇಶನಗಳನ್ನು ಅನುಸರಿಸಿ, ಕೆನರಾ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳು, ಮಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಮತ್ತು ಬೆಂಗಳೂರಿನ ಎನ್‌ಎಸ್‌ಎಸ್‌ನ ಪ್ರಾದೇಶಿಕ ನಿರ್ದೇಶನಾಲಯದ ಸಹಯೋಗದೊಂದಿಗೆ ಶಹೀದಿ ದಿವಸ್ ಸಂದರ್ಭದಲ್ಲಿ ಒಂದು ದಿನದ ಕಾಲೇಜು ಮಟ್ಟದ ‘ ಸ್ವಚ್ಛತಾ ಶಿಬಿರ ಮತ್ತು ಮತದಾರರ ಜಾಗೃತಿ ಅಭಿಯಾನ ‘ಜರುಗಿತು.
ಬೆಂಗಳೂರಿನ ಎನ್‌ಎಸ್‌ಎಸ್‌ನ ಪ್ರಾದೇಶಿಕ ನಿರ್ದೇಶಕ ಡಿ. ಕಾರ್ತಿಗೇಯನ್ ಮುಖ್ಯ ಅತಿಥಿಯಾಗಿದ್ದರು. ಎನ್‌ಎಸ್‌ಎಸ್ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಕಾರ್ತಿಗೇಯನ್ ಮತದಾರರು ತಮ್ಮ ಮತದಾನದ ಹಕ್ಕನ್ನು ಆತ್ಮಸಾಕ್ಷಿಯಾಗಿ ಚಲಾಯಿಸುವಂತೆ ತಿಳಿಸಿದರು.
ರಾಷ್ಟ್ರ ನಿರ್ಮಾಣಕ್ಕೆ ಅವರ ಸಕಾರಾತ್ಮಕ ಕೊಡುಗೆಯ ಮಹತ್ವವನ್ನು ಒತ್ತಿ ಹೇಳಿದರು. ಇದಲ್ಲದೆ, ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಎನ್‌ಎಸ್‌ಎಸ್ ಘಟಕಗಳು ಪ್ರದರ್ಶಿಸಿದ ಅಚಲವಾದ ಸಮರ್ಪಣೆ ಮತ್ತು ಬದ್ಧತೆಯನ್ನು ಅವರು ಶ್ಲಾಘಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ. ಮಾತನಾಡಿ, ಯುವಜನರಲ್ಲಿ ಸೇವಾ ಮನೋಭಾವ ಮತ್ತು ದೇಶ ಭಕ್ತಿಯನ್ನು ಬಡಿದೆಬ್ಬಿಸುವ ಕೆಲಸ ಎನ್ ಎಸ್ ಎಸ್ ಮೂಲಕ ನಿರಂತರವಾಗಿರಬೇಕು ಎಂದರು.
ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಪುಷ್ಪರಾಜ್ ಕೆ. ಅವರು ಮುಖ್ಯ ಭಾಷಣಕಾರರಾಗಿ “ಮೇರಾ ಪೆಹಲಾ ವೋಟ್ ದೇಶ್ ಕೆ ಲಿಯೇ” ವಿಷಯದ ಕುರಿತು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರೇಮಲತಾ ವಿ. ಅಧ್ಯಕ್ಷತೆ ವಹಿಸಿದ್ದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಸೀಮಾ ಪ್ರಭು ಎಸ್. ಅವರು ಎನ್‌ಎಸ್‌ಎಸ್ ಸ್ವಯಂಸೇವಕರಿಗೆ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಮತದಾರರ ಜಾಗೃತಿ ಪ್ರತಿಜ್ಞೆಗೆ ಸಹಿ ಹಾಕಲಾಯಿತು. ಇನ್ನೋರ್ವ ಕಾರ್ಯಕ್ರಮಾಧಿಕಾರಿ ಎಂ.ಕೀರ್ತನಾ ಭಟ್ ಸ್ವಾಗತಿಸಿ, ಸಾತ್ವಿಕ್ ಆಚಾರ್ಯ ವಂದಿಸಿದರು. ಲಿಖಿತ್ ಅವರು ಸಂಯೋಜಿಸಿದರು.