ಇತ್ತೀಚಿನ ಸುದ್ದಿ
ನಾಟಕ ಸ್ಪರ್ಧೆ: ಮಂಗಳೂರು ವಿಭಾಗದ ಸರಕಾರಿ ನೌಕರರ ಸಂಘದ ‘ನಾಗಮಂಡಲ’ ರಾಜ್ಯಮಟ್ಟಕ್ಕೆ ಆಯ್ಕೆ
27/03/2024, 22:26
ಮಂಗಳೂರು(reporterkarnataka.com): ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ನಡೆದ ನಾಟಕ ಸ್ಪರ್ಧೆಯಲ್ಲಿ ಗಿರೀಶ್ ಕಾರ್ನಾಡ ಅವರ ‘ನಾಗ ಮಂಡಲ’ (ಸ್ವತಂತ್ರ ರಂಗಾವಿಷ್ಕಾರ) ನಾಟಕ ಪ್ರಥಮ ಸ್ಥಾನದೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಮಾ. 19 ಮತ್ತು 20ರಂದು ಮಂಗಳೂರು ಮಿನಿ ವಿಧಾನಸೌಧದ ಬಳಿ ಇರುವ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆದಿತ್ತು.
ನಾಟಕ ಸ್ಪರ್ಧೆಯ ವಿಭಾಗದಲ್ಲಿ ‘ನಾಗ ಮಂಡಲ’ ನಾಟಕ ಪ್ರಥಮ ಸ್ಥಾನ ಪಡೆದಿದೆ.
ವಿನೂತನ ರಂಗ ಕಲ್ಪನೆಯೊಂದಿಗೆ ನಾಗಮಂಡಲ ನಾಟಕವನ್ನು ಮಂಗಳೂರು ವಿಭಾಗದ ಸರಕಾರಿ ನೌಕರರ ಸಂಘದ ಸದಸ್ಯರು ಮನೋಜ್ಞವಾಗಿ ಅಭಿನಯಿಸಿದ್ದರು. ಹಣ, ಮದ್ಯ, ಮಾದಕತೆ ಅಧಿಕಾರಗಳ ಹಿಂದೆ ಓಡುವ ಯುವ ಸಮಾಜ, ಶಿಥಿಲಗೊಳ್ಳುತ್ತಿರುವ ಕೌಟುಂಬಿಕ ಜೀವನದ ಕೈ ಕನ್ನಡಿಯಾಗಿ ನಾಗಮಂಡಲ ನಾಟಕವನ್ನು ಕಾಸರಗೋಡಿನ ಯುವ ರಂಗ ನಿರ್ದೇಶಕ ಸದಾಶಿವ ಬಾಲಮಿತ್ರ ಅವರು ವಿಭಿನ್ನವಾಗಿ ನಿರ್ದೇಶಿಸಿದ್ದು, ಹರೀಶ್ ಕುಮಾರ್ ತಲಪಾಡಿ ಅವರ ನೇತೃತ್ವದ ಅಭಿನಯ ತಂಡದಲ್ಲಿ ವಸಂತ ರೈ ಬಿ.ಕೆ., ಪ್ರತಿಮಾ ಹೆಬ್ಬಾರ್, ಜಯಲಕ್ಷ್ಮಿ ಜಿ.ಕುಂಪಲ ಕಲ್ಲರಕೋಡಿ, ಯಶೋದಾ ಪಿ., ಮಹಾಲಕ್ಷ್ಮಿ, ಇಂದಿರಾ ಜಿ. ಸುಜಾತ ಬೋಳಾರ, ರಾಮಕೃಷ್ಣ ಕಟ್ಟಿಮನಿ, ಯು.ಆರ್. ಶೆಟ್ಟಿ, ಮೊದಲಾದವರು ಮನೋಜ್ಞ ಅಭಿನಯ ನೀಡಿದ್ದರು. ಮೆಲ್ವಿನ್ ಪೆರ್ಮುದೆ ಸಂಗೀತ ಸಂಯೋಜನೆ ನೀಡಿದ್ದು, ಮೋಹನ್ ಸಿರಿರ್ಲಾಲ್, ಬಾಬು ಮಾಸ್ಟರ್, ಶಿವಪ್ರಸಾದ್ ಚೆರುಗೋಳಿ, ವಸಂತ ಮಾಸ್ಟರ್ ಮೂಡಂಬೈಲು, ದಿವಾಕರ ಬಲ್ಲಾಲ್, ಎಸ್.ಪಿ. ರಾವ್, ಅಶೋಕ್ ಕುಮಾರ್, ಬಾಲಕೃಷ್ಣ ಗಾಳಿಯಡ್ಕ ಮೊದಲಾದವರು ರಂಗಪರಿಕರಗಳಲ್ಲಿ ಸಹಕರಿಸಿದ್ದರು.