ಇತ್ತೀಚಿನ ಸುದ್ದಿ
ಚಳ್ಳಕೆರೆ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ: ನೆರೆದ ಭಕ್ತಸಾಗರದ ಹರ್ಷೋದ್ಘಾರ
27/03/2024, 20:13
ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಬರದ ನಾಡಿನಲ್ಲಿ ಕೆರೆ ಕಟ್ಟಿಸಿ ಜೀವ ಸಂಕುಲ ರಕ್ಷಣೆ ಮಾಡುವ ಮೂಲಕ ಪವಾಡವನ್ನೇ ಸೃಷ್ಟಿಸಿದ ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಶ್ರದ್ಧಾ, ಭಕ್ತಿ ಹಾಗೂ ವಿಜೃಂಭಣೆಯಿಂದ ಜರುಗಿತು.
ನಾಡಿನಾದ್ಯಂತ ಭೀಕರ ಬರ ಆವರಿಸಿದ್ದರೂ, ಹಟ್ಟಿ ತಿಪ್ಪೇರುದ್ರಸ್ವಾಮಿಯ ಮೇಲಿನ ಭಕ್ತಿಗೆ ಬರ ಇರಲಿಲ್ಲ. ಮಧ್ಯಾಹ್ನ 3 ಗಂಟೆಗೆ ಚಿತ್ತಾ ನಕ್ಷತ್ರದಲ್ಲಿ ಸ್ವಾಮಿಯ ಬೃಹತ್ ತೇರನ್ನು ಸಾವಿರಾರು ಭಕ್ತರು ಎಳೆದು ಪುನೀತರಾದರು.
ಮಾಡಿದಷ್ಟು ನೀಡು ಭಿಕ್ಷೆ ಎಂಬ ತತ್ವ ಸಂದೇಶ ಸಾರಿ, ಬರದ ನಾಡಿನಲ್ಲಿ ಜಲ ಸಂರಕ್ಷಣೆಯ ಮಹತ್ವ ತಿಳಿಸಿದ ನಾಯಕನಹಟ್ಟಿಯ ಕಾಯಕಯೋಗಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ರಥೋತ್ಸವದ ಅಂಗವಾಗಿ ಹರಕೆ ಮಾಡಿಕೊಂಡಿದ್ದ ಭಕ್ತರು ದೊಡ್ಡ ಅಗ್ನಿ ಕುಂಡದಲ್ಲಿ ಒಣ ಕೊಬ್ಬರಿ ಸುಟ್ಟು ಭಕ್ತಿ ಸಮರ್ಪಿಸಿದರು. ರಥವು ತೇರು ಬೀದಿಯಿಂದ ಪಾದಗಟ್ಟೆಯವರೆಗೆ ಚಲಿಸುವಾಗ ಭಕ್ತರು ರಥಕ್ಕೆ ಬಾಳೆಹಣ್ಣು, ಕಾಳುಮೆಣಸು, ಧವನ, ಹೂವು, ಚೂರು ಬೆಲ್ಲವನ್ನು ಸಮರ್ಪಿಸಿ ತಮ್ಮ ಇಷ್ಠಾರ್ಥವನ್ನು ಈಡೇರಿಸುವಂತೆ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತಾ ಶ್ರೀ ತಿಪ್ಪೇರುದ್ರಸ್ವಾಮಿಗೆ ಜಯವಾಗಲಿ, ‘ಕಾಯಕ ಯೋಗಿಗೆ ಜಯವಾಗಲಿ’ ತಿಪ್ಪೇರುದ್ರಸ್ವಾಮಿ ಮಹಾರಾಜ್ ಕಿ ಜೈ ಎನ್ನುವ ಜಯಘೋಷ ಕೂಗುತ್ತಾ ರಥದ ದೊಡ್ಡ ಗಾತ್ರದ ಮಣಿ ಹಗ್ಗ ಎಳೆದು ಧನ್ಯರಾದರು. ನಾಡಿನ ಸುಭೀಕ್ಷೆ ಹಾಗೂ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿದರು.
ಜಾತ್ರಾ ಮಹೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮೊಳಕಾಲ್ಮೂರು, ಶಾಸಕ ಎನ್.ವೈ.ಗೋಪಾಲಕೃಷ್ಣ, ಐತಿಹಾಸಿಕ ದೊಡ್ಡಕೆರೆ ಹೊಂದಿರುವ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಪವಾಡಗಳ ಮೂಲಕ ಮಧ್ಯ ಕರ್ನಾಟಕ ಜನಮಾನದಲ್ಲಿ ನೆಲೆ ನಿಂತಿರುವ ರಥೋತ್ಸವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಮಧ್ಯಾಹ್ನ 3:15 ಗಂಟೆಗೆ ಚಿತ್ತಾ ನಕ್ಷತ್ರದಲ್ಲಿ ತಿಪ್ಪೇರುದ್ರಸ್ವಾಮಿ ರಥವನ್ನು ರಥದ ಬೀದಿಯಿಂದ ಹೊರಮಠದವರಿಗೆ ಭಕ್ತರು ಎಳೆದರು. ಈ ವೇಳೆ ಸಾಹಸ್ರಾರು ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿಭಾವದ ಸಮರ್ಪಣೆ ಅರ್ಪಿಸಿದರು. ತಿಪ್ಪೇರುದ್ರಸ್ವಾಮಿ ಐಕ್ಯ ಆಗಿರುವ ಹೊರಮಠ ಹಾಗೂ ದೇವರ ವಿಗ್ರಹ ಮತ್ತು ಮುಖ್ಯವಾಗಿರುವ ಒಳಮಠ ಎರಡು ಕಡೆಗಳಲ್ಲಿ ಬೆಳಗ್ಗೆಯಿಂದಲೇ ಬಿಡುವಿಲ್ಲದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.
ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುಳಕಿತರಾದರು. ಶ್ರೀ ತಿಪ್ಪೇರುದ್ರಸ್ವಾಮಿಯ ಜಾತ್ರೆಯ ವಿಶೇಷತೆಗಳಲ್ಲಿ ಒಂದಾಗಿರುವ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ಒಂದಾಗಿದೆ.ಈ ಹರಾಜು ಪ್ರಕ್ರಿಯೆಯಲ್ಲಿ ದೇವರ ಮುಕ್ತಿ ಬಾವುಟ ಪಡೆಯಲು ಹಲವಾರು ಭಾಗಿ ಆಗಿದ್ದರು. ಅಂತಿಮವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ₹61,00,000 ಮುಕ್ತಿ ಬಾವುಟವನ್ನು ತನ್ನದಾಗಿಸಿಕೊಂಡರು. ಕಳೆದ ವರ್ಷವೂ ಸಚಿವ ಡಿ.ಸುಧಾಕರ್ ಅವರೇ ಹರಾಜಿನಲ್ಲಿ ₹55,00,000ಕ್ಕೆ ಮುಕ್ತಿ ಬಾವುಟ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
*ಜಾತ್ರೆಗೆ ಹರಿದು ಬಂದ ಭಕ್ತ ಸಾಗರ:* ಚಳ್ಳಕೆರೆ ತಾಲೂಕಿನ ನಾಯಕನಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ದತ್ತ ಸಾಗರದಲ್ಲಿ ಹರಿದುಬಂದಿತು. ಡಾ.ಬಿ.ಯೋಗೇಶ ಬಾಬು, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಸೇರಿದಂತೆ ಚಿತ್ರದುರ್ಗ, ದಾವಣಗೆರೆ, ತುಮಕೂರು, ಆಂಧ್ರಪ್ರದೇಶದ ಲಕ್ಷಾಂತರ ಭಕ್ತರು ನೆರೆದಿದ್ದರು.