12:54 PM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

World Elephant day: ಕಾಡೆಂಬ ನಿಗೂಢ ಸ್ವಚ್ಛಂದ ಲೋಕದ ನಿಜವಾದ ಬುದ್ದಿವಂತ ಪ್ರಾಣಿ ಆನೆ !

13/08/2021, 11:04

ವಿಶ್ವಾಸ್ ಭಾರದ್ವಾಜ್

info.reporterkarnataka@gmail.com

ಒಮ್ಮೆ ಆನೆಯ ಬಿಹೇವಿಯರ್ ಅರ್ಥ ಮಾಡಿಕೊಂಡರೆ ನಾಯಿ, ಬೆಕ್ಕು ಮುಂತಾದ ಪೆಟ್ ಪ್ರಾಣಿಗಳಿಗಿಂತ ಇಷ್ಟವಾಗಿಬಿಡುತ್ತೆ.. 

ಆನೆಗಳು ಮನುಷ್ಯರನ್ನು ಹಚ್ಚಿಕೊಂಡರೆ ಪ್ರಾಣದ ಗೆಳಯರಾಗಿಬಿಡುತ್ತವೆ.. ಸತ್ತ ಆನೆಗಾಗಿ ಕೊರಗಿ ಸೊರಗಿದ ಮಾವುತ ಕಾವಡಿಗಳನ್ನು ನೋಡಿದ್ದೇನೆ.. ಮಾವುತ ಸತ್ತನೆಂದು ಆಹಾರ ಬಿಟ್ಟು ಸತ್ತ ಆನೆಯೊಂದರ ಕಥೆಯನ್ನೂ ಕೇಳಿದ್ದೇನೆ.. ಕಾಡೆಂಬ ನಿಗೂಢ ಸ್ವಚ್ಛಂದ ಅನೂಹ್ಯ ಲೋಕದ ನಿಜವಾದ ಬುದ್ದಿವಂತ ಪ್ರಾಣಿ ಆನೆ.. 

ಪಾರಂಪರಿಕ ವಲಸೆ ಮಾರ್ಗ ಸೃಷ್ಟಿಸಿಕೊಂಡು ತಲೆತಲೆಮಾರುಗಳು ಅದೇ ಗಜಮಾರ್ಗದಲ್ಲಿ ಸಂಚರಿಸುತ್ತವೆ ಆನೆಗಳು.. ಆನೆಗಳಿಗೆ ತಮ್ಮ ವಾಕ್ ಪಾಥ್ ಯಾವುದು ಅನ್ನುವುದು ಅನುವಂಶೀಯವಾಗಿ ತಿಳಿಯುತ್ತದೆ.. ಅಜ್ಜ ಸಂಚರಿಸಿದ ಮಾರ್ಗದಲ್ಲಿ ಮೊಮ್ಮಗ ಆನೆಯೂ ಸಂಚರಿಸುತ್ತದೆ.. ಆ ಮಾರ್ಗದ ಪ್ರತಿ ಗುರುತನ್ನೂ ಆನೆ ನೆನಪಿಟ್ಟುಕೊಳ್ಳುತ್ತದೆ.. 

ಒಂದು ಪಳಗಿದ ಆನೆ ಎಂತದ್ದೇ ಅಸಾಧ್ಯದ ಕೆಲಸವನ್ನೂ ಸಾಧ್ಯವಾಗಿಸುತ್ತದೆ.. ಮನುಷ್ಯನ ಕಮಾಂಡ್ ಅರ್ಥ ಮಾಡಿಕೊಂಡು ಅಕ್ಯೂರೇಟ್ ಆಗಿ ಸ್ಪಂದಿಸುವ ಅಪರೂಪದ ದೈತ್ಯ ಜೀವಿ ಆನೆ.. 

ಅವಿಭಕ್ತ ಕುಟುಂಬ ವ್ಯವಸ್ಥೆಯನ್ನು ಪಾಲಿಸಿಕೊಂಡು ಬರುತ್ತವೆ ಆನೆಗಳು.. ಹೆಣ್ಣಾನೆ ತನ್ನ ಮರಿಗಳನ್ನು ಗುಂಪಿನ ಮಧ್ಯ ಇಟ್ಟುಕೊಂಡು ಪ್ರೊಟೆಕ್ಟ್ ಮಾಡುತ್ತವೆ.. ಒಂದು ಆರೋಗ್ಯವಂತ ಆನೆ ಪ್ರತೀ ದಿನ ಕನಿಷ್ಟ 40 ಕಿಲೋಮೀಟರ್ ವಲಸೆ ಮಾಡುತ್ತದೆ.. ಆನೆಗಳು ಅತ್ಯುತ್ತಮ ಈಜುಪಟುಗಳು.. ನೀರಿನಲ್ಲಿ ಲೀಲಾಜಾಲವಾಗಿ ಸಲೀಸಾಗಿ ದಣಿವಿಲ್ಲದೆ ಈಜುತ್ತವೆ.. ನೀರಿನಲ್ಲಿ ಜಲಕ್ರೀಡೆಯಾಡಿದ ನಂತರ ಮಣ್ಣಿನ ಸ್ನಾನ ಮಾಡುವ ಆನೆಗಳು ಪ್ರಕೃತಿಯ ಸನ್ಹೆ ಸೂಚನೆಗಳನ್ನೂ ಸ್ಪಷ್ಟವಾಗಿ ಗ್ರಹಿಸುತ್ತವೆ.. 

ಆನೆಗಳಿಗೆ ಎಳೆಬಿದಿರು, ಬಾಳೆ ಕಬ್ಬು ಹಾಗೂ ಜೊಂಡು ಹುಲ್ಲು ಅತಿ ಅಚ್ಚುಮೆಚ್ಚಿನ ಆಹಾರ.. ಅದೆಷ್ಟೆ ಎತ್ತರದ ಗುಡ್ಡವನ್ನಾದರೂ ಗಜಪಡೆ ಸುಲಭವಾಗಿ ಆರೋಹಣ ಹಾಗೂ ಅವರೋಹಣ ಮಾಡುತ್ತವೆ.. ಮದ ಬಂದ ಗಂಡು ಆನೆಯನ್ನು ಸೇರಲು ಹೆಣ್ಣು ಆನೆಗಳು ನಿರಾಕರಿಸುತ್ತವೆ ಆದರೆ ಅದೇ ಮದಗಜ ಒಂದು ಅವಧಿಯಲ್ಲಿ ನಾಲ್ಕು ಹೆಣ್ಣುಗಳನ್ನು ಗರ್ಭವತಿಯನ್ನಾಗಿಸುತ್ತವೆ ಅನ್ನುತ್ತಾರೆ ಆನೆ ತಜ್ಞರು.. ಅದೆಷ್ಟೇ ಧೈರ್ಯವಂತ ಮನುಷ್ಯನನ್ನೂ ಕಂಗೆಡುವಂತೆ ಮಾಡುತ್ತದೆ ಆನೆಯ ಒಂದು ಘೀಳು.. ಆನೆ ತನ್ನ ಸೊಂಡಲಿನ ತುದಿಯಿಂದ ಮರದ ತೊಗಟೆಯ ತೆಳ್ಳನೆಯ ಸೀಳು ಸುಲಿಯುತ್ತವೆ.. ಅದೆಂತದ್ದೇ ಎಲೆಕ್ಟ್ರಕ್ ಫೆನ್ಸಿಂಗ್ ತಮ್ಮ ವಲಸೆ ಮಾರ್ಗದಲ್ಲಿದ್ದರೂ ಚಾಣಾಕ್ಷತನದಿಂದ ದಾಟಿ ಪಾರಾಗುತ್ತವೆ ಆನೆಗಳು.. ಗಜ-ಮಾನವ ಸಂಘರ್ಷ ಶತಶತಮಾನಗಳಿಂದ ನಡೆದು ಬಂದಿದೆ.. ಅರಣ್ಯ ಇಲಾಖೆಗೆ ಸದಾ ತಲೆನೋವು ತಂದೊಡ್ಡುವುದು ಆನೆಗಳ ಬುದ್ದಿವಂತಿಕೆ.. 

ಆನೆಗಳಿಗೆ ಪ್ರೈವೆಸಿ ಬೇಕು ಪ್ರಶಾಂತತೆ ಬೇಕು.. ಗದ್ದಲಗಳಿಂದ ದೂರವಿದ್ದು ತಮ್ಮ ನೆಲೆಯನ್ನು ಹುಡುಕಿಕೊಳ್ಳುತ್ತವೆ ಕರಿವಂಶ.. ನಮ್ಮ ಪಶ್ಚಿಮ ಘಟ್ಟ ಏಷ್ಯಾದ ಅತಿ ದೊಡ್ಡ ಎಲಿಫೆಂಟ್ ಕಾರಿಡಾರ್. ಏಷ್ಯನ್ ಎಲಿಫೆಂಟ್ ಅತಿ ಹೆಚ್ಚಿರುವುದು ಭಾರತದಲ್ಲಿ ಅದರಲ್ಲೂ ನಮ್ಮ ಕರ್ನಾಟಕದಲ್ಲಿ.. ಭಾರತದಲ್ಲಿ ಬರೋಬ್ಬರಿ 25 ಸಾವಿರಕ್ಕೂ ಹೆಚ್ಚಿನ ಏಷ್ಯನ್ ಆನೆಗಳಿವೆ. ನಮ್ಮ ರಾಜ್ಯದ ಕಾಡುಗಳಲ್ಲ ಹತ್ತಿರ ಹತ್ತಿರ 7 ಸಾವಿರ ಆನೆಗಳಿವೆ ಅನ್ನುತ್ತದೆ ಇತ್ತೀಚೆಗೆ ನಡೆಸಲಾದ ಗಜಗಣತಿಯ ವರದಿಗಳು.. ನಡೆಯಲಾರದ ಆನೆ ಹೆಚ್ಚು ದಿನ ಬದುಕುವುದಿಲ್ಲ.. ಆನೆಗಳ ಅತ್ಯಂತ ಪ್ರಿಯವಾದ ಚಟುವಟಿಕೆ ಜಲಕ್ರೀಡೆ. 

ಇಂತದ್ದೇ ಇನ್ನೊಂದು ಇಂಟರೆಸ್ಟಿಂಗ್ ಸಂಗತಿ ಅಂದರೆ ತನ್ನ ಕುಟುಂಬದ ಸದಸ್ಯ ಆನೆಯೊಂದು ಪ್ರಾಣಬಿಟ್ಟ ಸ್ಥಳವನ್ನೂ ಆ ಕುಟುಂಬದ ಎಲ್ಲಾ ಆನೆಗಳು ನೆನಪಿನಲ್ಲಿಟ್ಟುಕೊಂಡಿರುತ್ತವೆ.. ಪ್ರತೀ ಸಲ ವಲಸೆ ಸಮಯದಲ್ಲಿ ಆ ಸ್ಥಳಕ್ಕೆ ಬಂದಾಗ ಆ ಜಾಗದಲ್ಲಿ ನಿಂತು ಶ್ರದ್ಧಾಂಜಲಿ ಸಲ್ಲಿಸುತ್ತವೆ.. ಇವೆಲ್ಲವೂ ಮಿಥ್ ಅಲ್ಲ; ಸತ್ಯ.. ಆನೆಗಳು ಕಾಡಿನ ರಕ್ಷಕರು, ನಮ್ಮ ಅರಣ್ಯದ ನಿಜವಾದ ಸಂಪತ್ತು.. ಆನೆಗಳ ಮೇಲೆ ಪ್ರೀತಿ ಬೆಳೆಸಿಕೊಳ್ಳೋಣ.. 

ಆರೋಗ್ಯವಂತ ಆನೆಗೆ ದಿನವೊಂದಕ್ಕೆ ಕನಿಷ್ಟ 300 – 350 ಕೆಜಿ ಆಹಾರ ಬೇಕು. ಎಳೆಬಿದಿರು, ಜೊಂಡುಹುಲ್ಲು ಅಥವಾ ಆನೇ ಹುಲ್ಲು, ಮರದ ತೊಗಟೆ ಆನೆಯ ಸಹಜ ಸರಳ ಆಹಾರ. ಆದರೆ ಕಬ್ಬು, ಬಾಳೆ ಸಿಕ್ಕರೆ ಮಾತ್ರ ಆನೆಗಳಿಗೆ ಭೂರಿಭೋಜನ. 

ಆನೆ ಕಾರಿಡಾರ್ ನಾಶವಾಗಿದ್ದೇ ಆನೆಗಳು ನಾಡಿಗೆ ಬರಲು ಕಾರಣ. ಅವುಗಳು ಚಲಿಸುವ ದಾರಿಯನ್ನು ನಾವು ಬಂದ್ ಮಾಡಿ ರಸ್ತೆ, ಡ್ಯಾಂ ಕಟ್ಟಿದರೆ ಅವಕ್ಕೆ ಅದು ತಿಳಿಯುವುದಾದರೂ ಹೇಗೆ. ಆನೆ ತನ್ನ ದಾರಿಯನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ ಮತ್ತು ಶತಶತಮಾನಗಳ ಕಾಲ ಅದೇ ದಾರಿಯಲ್ಲಿ ಚಲಿಸುತ್ತದೆ. ಇದೇ ಗಜಮಾರ್ಗ ಅಥವಾ ಪಾರಂಪರಿಕ ಆನೇ ಕಾರಿಡಾರ್. 

ಆನೆ ನಾಡಿಗೆ ಬರಲು ಶುರು ಮಾಡಿದರೆ ಕಬ್ಬು ಮತ್ತು ಬಾಳೆಯ ತೋಟವೇ ಅದರ ಟಾರ್ಗೆಟ್. ಅದಕ್ಕಿಂತ ವಿಚಿತ್ರ ಅಂದರೆ ಆನೆಗಳು ಕಾಕಂಬಿ ಅಥವಾ ಮೊಲೇಸಿಸ್ ಅಥವಾ ಕಳ್ಳ ಬಟ್ಟಿ ಕೊಳೆಯ ಅಡಿಕ್ಷನ್ ಬಹಳ ಬೇಗನೆ ಹಚ್ಚಿಕೊಳ್ಳುತ್ತವೆ. ಒಮ್ಮೆ ಇದರ ರುಚಿ ನೋಡಿದ ಆನೆಗೆ ಕಿಲೋ ಮೀಟರ್ ದೂರದಲ್ಲಿದ್ದರೂ ಕಳ್ಳಭಟ್ಟಿ ಕಡಾಯಿಯ ವಾಸನೆ ಸುಳಿವು ಸಿಕ್ಕು ಬಿಡುತ್ತದೆ. ಆನಂತರ ಆನೆಗಳ ಉಪಟಳವನ್ನು ನಿಯಂತ್ರಿಸುವುದು ಕಷ್ಟಸಾಧ್ಯ. 

ಆನೆಗಳು ಪ್ರಕೃತಿಯ ಅತ್ಯುತ್ತಮ ಸೇನಾನಿಗಳು. ಪ್ರಕೃತಿ ಪೋಷಣೆಯಲ್ಲಿ ಇವುಗಳ ಪಾತ್ರ ಅತಿ ದೊಡ್ಡದು. ಆನೆ ತನ್ನ ದೈತ್ಯ ಗಾತ್ರದ ಹೆಜ್ಜೆ ಇಟ್ಟಲ್ಲೆಲ್ಲಾ ಇಂಗು ಗುಂಡಿ ನಿರ್ಮಿಸಿ ನೀರು ಇಂಗಿಸುತ್ತದೆ. ಕೆಲವು ಬಾರಿ ಆನೆ ಒಂದಷ್ಟು ಮಣ್ಣು ತಿನ್ನುತ್ತದೆ. ಸ್ನಾನವಾದ ನಂತರ ಇದು ತನ್ನ ಮೇಲೆ ಮಣ್ಣೆರೆಚಿಕೊಳ್ಳುತ್ತದೆ. ಇದಕ್ಕಾಗಿ ಧರೆ ಅಥವಾ ಗುಡ್ಡದ ಮಣ್ಣು, ಗಟ್ಟಿ ಮೇಲ್ಪದರದ ಮಣ್ಣನ್ನು ತೋಡಿ ಭೋಮಿಯ ಮೇಲ್ಮೈಯನ್ನು ಫಲವತ್ತುಗೊಳಿಸುತ್ತದೆ. ಆನೆ ಇಡುವ ಕೇಜಿಗಟ್ಟಲೇ ಲದ್ದಿ ಪ್ರಕೃತಿ ಕೃಷಿಯ ಅತ್ಯುತ್ತಮ ಸಾವಯವ ಗೊಬ್ಬರ. ವಿವಿಧ ಜಾತಿಯ ಅನೇಕ ಬೀಜಗಳು ಮೊಳಕೆಯೊಡೆಯುವುದೇ ಈ ಲದ್ದಿಯ ಸಮೃದ್ಧತೆಯಿಂದ. 

ಆನೆಗೆ ಹೇಗೆ ಮನುಷ್ಯರ ಸುಳಿವು ವಾಸನೆಯಿಂದ ತಿಳಿಯುತ್ತದೋ ಹಾಗೆಯೇ ಮನುಷ್ಯ ಸಹ ಆನೆಯ ಸುಳಿವನ್ನು ವಾಸನೆಯಿಂದಲೇ ಪತ್ತೆ ಹಚ್ಚಬಹುದು. ದಟ್ಟ ಕಾಡಿನಲ್ಲಿ ಸಾಮಾನ್ಯವಾಗಿ ಸದ್ದೇ ಮಾಡದೇ ಸಂಚರಿಸುವ ಆಹಾರ ತಿನ್ನುವ ಆನೆಗಳ ಹಿಂಡು ಹತ್ತಿರದಲ್ಲಿದ್ದರೆ ಹುಳಿ ಹುಳಿ ವಾಸನೆ ಬರುತ್ತದೆ. ಇನ್ನು ಸಾಮಾನ್ಯವಾಗಿ ಮನುಷ್ಯನಿಗೆ ತೊಂದರೆ ಕೊಡದ ಆನೆಗಳು ಮೊದಲೊಂದು ಎಚ್ಚರಿಕೆ ನೀಡುವ ದೃಷ್ಟಿಯಲ್ಲಿ ಘೀಳಿಟ್ಟು ವಾರ್ನಿಂಗ್ ಕಾಲ್ ಕೊಡುತ್ತವೆ. ತನ್ನ ಕಣ್ಣಿಂದ ಮರೆಯಾಗಿ ಓಡಲಿ ಎನ್ನುವುದು ಈ ಘೀಳಿನ ಉದ್ದೇಶ. ಆದರೆ ಆ ಸಮಯದಲ್ಲಿ ಎದುರು ನಿಂತು ಅವುಗಳನ್ನು ಕೆರಳಿಸುವ ಕೆಲಸ ಮಾಡಿದಾಗ ಮಾತ್ರ ಅವು ಆಕ್ರಮಣಕ್ಕೆ ಮುಂದಾಗುತ್ತವೆ. ಪುಟ್ಟ ಮರಿಯಾನೆ ಹಿಂಡಿನಲ್ಲಿದ್ದರೆ, ಗುಂಪಿನಿಂದ ಬೇರೆಯಾದ ಒಂಟಿ ಸಲಗ, ಮಸ್ತ್ ಅಥವಾ ಮದದಲ್ಲಿರುವ ಗಂಡಾನೆ, ದಾರಿ ತಪ್ಪಿದ ಪುಂಡಾನೆ ಹೊರತುಪಡಿಸಿದ್ರೆ ಉಳಿದಂತೆ ಸಾಮಾನ್ಯವಾಗಿ ಆನೆಗಳು ಆಕ್ರಮಣಾಶೀಲ ಪ್ರಾಣಿಗಳಲ್ಲ. ಪಳಗಿದ ಆನೆ ತನ್ನ ಮಾಲೀಕ ಮನುಷ್ಯನ ಮೇಲೆ ತೋರಿಸುವ ನಿಷ್ಟೆ ನಾಯಿಯಷ್ಟೆ ಮಹತ್ವದ್ದು. 

ಇತ್ತೀಚಿನ ಸುದ್ದಿ

ಜಾಹೀರಾತು