ಇತ್ತೀಚಿನ ಸುದ್ದಿ
ಕಡಲನಗರಿ ಮಂಗಳೂರು ಸೇರಿದಂತೆ ಕರಾವಳಿಯಾದ್ಯಂತ ಭಕ್ತಿ- ಸಂಭ್ರಮದ ಪಾಮ್ ಸಂಡೇ ಆಚರಣೆ: ಈಸ್ಟರ್ ಹಬ್ಬಕ್ಕೆ ಪೂರ್ವ ಸಿದ್ಧತೆ
24/03/2024, 13:45
ಮಂಗಳೂರು(reporterkarnataka.com): ಕಡಲನಗರಿ ಮಂಗಳೂರು ಸೇರಿದಂತೆ ಕರಾವಳಿಯೆಲ್ಲಡೆ ಚರ್ಚ್‍ಗಳಲ್ಲಿ ಪಾಮ್ ಸಂಡೇ (ಗರಿಗಳ ಭಾನುವಾರ) ಅನ್ನು ಭಕ್ತಿ- ಸಂಭ್ರಮದಿಂದ ಆಚರಿಸಲಾಯಿತು.
ಯೇಸು ಕ್ರಿಸ್ತರು ಶಿಲುಬೆಗೆ ಏರುವ ಒಂದು ವಾರದ ಮೊದಲು ಅಂದಿನ ಜೆರೋಸಲೆಂ ಪಟ್ಟಣವನ್ನು ಯೇಸು ಕ್ರಿಸ್ತರು ಪ್ರವೇಶಿಸುವಾಗ ಯಹೂದಿ ಸಮುದಾಯದವರು ಅಲಿವ್ ಮರದ ಗರಿಗಳಿಂದ ದಾರಿಯನ್ನು ಶೃಂಗರಿಸಿಕೊಂಡು ಅವರನ್ನು ಬರಮಾಡಿಕೊಂಡರು ಎಂಬ ಐತಿಹ್ಯವಿದೆ. ಈ ನಂಬಿಕೆಯ ಮೇಲೆ ಗರಿಗಳ ಹಬ್ಬದ ಆಚರಣೆ ಪ್ರತಿ ವರ್ಷ ನಡೆಸಲಾಗುತ್ತದೆ. ವಿಶೇಷವಾಗಿ ಕ್ರೈಸ್ತರು ಆಚರಿಸುವ ಕಪ್ಪು ತಿಂಗಳ ಕೊನೆ ವಾರದಲ್ಲಿ ಪವಿತ್ರ ವಾರದ ಆರಂಭದ ದಿನದಂದು ಕ್ರೈಸ್ತರು ಗರಿಗಳ ಭಾನುವಾರ ಎಂದು ಆಚರಿಸುತ್ತಾರೆ.
ನಗರದ ರೊಸಾರಿಯೋ ಕ್ಯಾಥಡ್ರಲ್ ಚರ್ಚ್, ಮಿಲಾಗ್ರಿಸ್ ಚರ್ಚ್, ಲೇಡಿಹಿಲ್ ಚರ್ಚ್, ಅಶೋಕ ನಗರ ಚರ್ಚ್, ಬಿಜೈ ಚರ್ಚ್, ಬಿಕರ್ನಕಟ್ಟೆ ಬಾಲಯೇಸು ಮಂದಿರ, ಪಾಲ್ದನೆ ಚರ್ಚ್,
ಕೂಳೂರು ಚರ್ಚ್ ಸೇರಿದಂತೆ ಮಂಗಳೂರು, ಉಡುಪಿ ಧರ್ಮಪ್ರಾಂತ್ಯದ ಎಲ್ಲ ಚರ್ಚ್‍ಗಳಲ್ಲಿ ಗರಿಗಳ ಹಬ್ಬದ ಆಚರಿಸುವ ಮೂಲಕ ಕ್ರೈಸ್ತರು ಮುಂದೆ ಬರುವ ಪವಿತ್ರ ಗುರುವಾರ, ಶುಭ ಶುಕ್ರವಾರ(ಗುಡ್‍ಫ್ರೈಡೇ) ಹಾಗೂ ಈಸ್ಟರ್ ಹಬ್ಬಕ್ಕೆ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ. ಬಿಷಪ್ ಪೀಟರ್ ಪೌಲ್ ಸಲ್ದಾನ ಅವರು ರೊಸಾರಿಯೊ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಪಾಮ್ ಸಂಡೇ ಮತ್ತು ಈಸ್ಟರ್ ಜಾಗರಣೆಯನ್ನು ಆರಂಭಿಸಿದರು.
ಮಂಗಳೂರಿನ ಪಾಲ್ದನೆ ಸೈಂಟ್ ತೆರೆಸಾ ಚರ್ಚ್ ನಲ್ಲಿ ಗರಿಗಳ ಭಾನುವಾರ(ಪಾಮ್ ಸಂಡೇ) ಆಚರಿಸಲಾಯಿತು. ಚರ್ಚ್ ನ ಧರ್ಮಗುರುಗಳಾದ ವಂ| ಫಾ| ಆಲ್ವನ್ ಡಿಸೋಜ, ಶಿವಮೊಗ್ಗ ಡಯಾಸಿಸಿನ ವಂ| ಫಾ|.ರೋಶನ್ ಡಿಸೋಜ, ಚರ್ಚಿನ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೀರೊ ಮುಂತಾದವರು ಉಪಸ್ಥಿತರಿದ್ದರು.
ವಿಶೇಷವಾಗಿ ಧರ್ಮಗುರುಗಳು ಚರ್ಚ್ ಗಳಲ್ಲಿ ಪವಿತ್ರ ಕೃತಜ್ಞತಾ ಪೂಜೆಯ ಮೊದಲು ಗರಿಗಳನ್ನು ಪವಿತ್ರ ನೀರಿನಿಂದ ಶುದ್ಧೀಕರಿಸಿದ ಬಳಿಕ ಗರಿಗಳ ಪೂಜೆಯನ್ನು ಮಾಡಿ ವಾಳೆಗಳ ಗುರಿಕಾರರ ಮೂಲಕ ಕಥೋಲಿಕ್ ಕುಟುಂಬಗಳಿಗೆ ಗರಿಗಳ ಹಂಚುವಿಕೆ ಕಾರ್ಯ ಮಾಡುತ್ತಾರೆ. ಈ ಗರಿಗಳನ್ನು ಮೆರವಣಿಗೆಯ ಮೂಲಕ ಹಿಡಿದುಕೊಂಡು ಭಕ್ತರು ಚರ್ಚ್‍ಗಳಿಗೆ ಬರುತ್ತಾರೆ. ಈ ಸಮಯದಲ್ಲಿ ಚರ್ಚ್ ನೊಳಗೆ ಪ್ರವೇಶ ಪಡೆದ ಬಳಿಕ ಈ ಗರಿಗಳನ್ನು ಹಿಡಿದುಕೊಂಡು ಪೂಜಾವಿಧಿಗಳಲ್ಲಿ ಭಾಗವಹಿಸುತ್ತಾರೆ. ಈ ಬಳಿಕ ಈ ಗರಿಗಳನ್ನು ಪಡೆದು ಕ್ರೈಸ್ತ ಸಮುದಾಯದವರು ಶಿಲುಬೆ ಪ್ರತಿರೂಪ ರಚಿಸಿ ಮನೆಯಲ್ಲಿಟ್ಟುಕೊಳ್ಳುತ್ತಾರೆ. ಪಾಮ್ ಸಂಡೇಯಂದು ಕರಾವಳಿಯ ಚರ್ಚ್ ಗಳಲ್ಲಿ ವಿಶೇಷ ಕೃತಜ್ಞತಾ ಪೂಜೆ ಹಾಗೂ ಬೈಬಲ್‍ನಲ್ಲಿ ಹೇಳಿದ ಯೇಸುವಿನ ಕೊನೆಯ ದಿನಗಳ ಹಾದಿಯನ್ನು ಪ್ರಾರ್ಥನೆ ಹಾಗೂ ಕೀರ್ತನೆಗಳ ಮೂಲಕ ಭಕ್ತರಿಗೆ ಧರ್ಮಗುರುಗಳು ಪ್ರವಚನದ ಮೂಲಕ ತಿಳಿಯಪಡಿಸಿದರು.
ಧರ್ಮಗುರುಗಳು ಬೈಬಲ್ ನಲ್ಲಿರುವ ಯೇಸುವಿನ ಜೆರುಸಲೆಂ ಪ್ರವೇಶದ ಸನ್ನಿವೇಶವನ್ನು ಸ್ಮರಿಸುತ್ತಾರೆ ಹಾಗೂ ಸಂದೇಶ ನೀಡುತ್ತಾರೆ. ಯೇಸು ಕ್ರಿಸ್ತರಿಗೆ ಶಿಲುಬೆಯ ಶಿಕ್ಷೆ ವಿಧಿಸುವಲ್ಲಿಂದ ಹಿಡಿದು ಅವರು ಶಿಲುಬೆಗೇರಿ ಅಲ್ಲಿ ಮರಣ ಹೊಂದಿ ಅವರ ದೇಹವನ್ನು ಸಮಾಧಿ ಮಾಡುವಲ್ಲಿ ವರೆಗಿನ ಕಥಾನಕವನ್ನು ಬೈಬಲ್‍ನಿಂದ ವಾಚಿಸಲಾಗುತ್ತದೆ. ಇದರ ಆಧಾರದಲ್ಲಿ ವಿಶೇಷ ಪ್ರವಚನ ಸಾಗುತ್ತದೆ ಎನ್ನುತ್ತಾರೆ ಮಂಗಳೂರಿನ ಲೇಡಿಹಿಲ್ ಚರ್ಚ್ ನ ಪ್ರಧಾನ ಧರ್ಮಗುರು ಫಾ. ಬೆಂಜಮಿನ್ ಪಿಂಟೋ ಅವರು.