ಇತ್ತೀಚಿನ ಸುದ್ದಿ
ಮುಖ್ಯಮಂತ್ರಿ ಕ್ಷೇತ್ರದಲ್ಲಿ ಪ್ರತಿಭಟನಾ ನಿರತ ರೈತ ಮಹಿಳೆ ಸಾವು: ರಾಜ್ಯ ಸರಕಾರದಿಂದ ನಿರ್ಲಕ್ಷ್ಯ?
23/03/2024, 22:07

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಬನ್ನಾರಿಯಮ್ಮನ್ ಸಕ್ಕರೆ ಕಾರ್ಖಾನೆಗೆ ಭೂಮಿ ಕಳೆದುಕೊಂಡ ರೈತರು ಕಳೆದ 46 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾ ನಿರತ ರೈತ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಕಳೆದ 46 ದಿನಗಳಿಂದ ಬಿಸಿಲು ಚಳಿ ಎನ್ನದೆ ರೈತರು
ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡ ಸುಮಾರು 120 ಕುಟುಂಬಗಳು ಪ್ರತಿಭಟನಾನಿರತವಾಗಿವೆ. ಇವರಲ್ಲಿ 65 ವರ್ಷದ ನಿಂಗಮ್ಮ ಎಂಬುವರು ಸಾವನ್ನಪ್ಪಿದ್ದಾರೆ. ಇವರು ಕಳೆದ 46 ದಿನಗಳಿಂದಲೂ ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಿಂಗಮ್ಮ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿ ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರ ಸ್ವಗ್ರಾಮ ಅಳಗಂಚಿಯಲ್ಲಿ ಮೃತಪಟ್ಟಿದ್ದಾರೆ. ಗ್ರಾಮದ ನಂಜನಾಯಕ ಉರುಫ್ ಕುರಿನಾಯ್ಕ ಎಂಬುವರ ಪತ್ನಿಯಾದ ನಿಂಗಮ್ಮ ಮೃತಪಟ್ಟ ದುರ್ದೈವಿ. ಮೃತರಿಗೆ ಪತಿ ನಂಜನಾಯಕ ಸೇರಿದಂತೆ ಮೂರು ಮಂದಿ ಮಕ್ಕಳಿದ್ದಾರೆ.
ಕಾರ್ಖಾನೆಯಲ್ಲಿ ಕಾಯಂ ಉದ್ಯೋಗ ಸಿಗುತ್ತದೆ ಎಂಬ ಉದ್ದೇಶದಿಂದ ನಂಜನಾಯಕ ಅವರ ಎರಡು ಎಕರೆ ಜಮೀನನ್ನು ಕೆ ಐ ಎ ಡಿ ಬಿ ಮುಖಾಂತರ ಬಣ್ಣಾರಿಯಮ್ಮನ್ ಸಕ್ಕರೆ ಕಾರ್ಖಾನೆಗೆ ನೀಡಿರುತ್ತಾರೆ.
ಆದರೂ ಭೂಮಿ ನೀಡಿದ ರೈತ ಕುಟುಂಬಕ್ಕೆ ಕಾಯಂ ಉದ್ಯೋಗ ನೀಡದ ಹಿನ್ನೆಲೆಯಲ್ಲಿ ಭೂಮಿ ನೀಡಿದ್ದ ಸುಮಾರು 120 ಕುಟುಂಬಗಳು ಕಾರ್ಖಾನೆ ಮುಂಭಾಗ ಕಳೆದ 46 ದಿನಗಳಿಂದ ಅಹೋ ರಾತ್ರಿ ಧರಣಿ ನಡೆಸುತ್ತಾ ಬಂದಿದ್ದಾರೆ.
ಆದರೂ ಇದುವರೆಗೂ ಕ್ಷೇತ್ರದ ಶಾಸಕ ಸಿಎಂ ಸಿದ್ದರಾಮಯ್ಯ ಆಗಲಿ ಅವರ ಪುತ್ರ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಆಗಲಿ ಅಥವಾ ಉನ್ನತ ಮಟ್ಟದ ಅಧಿಕಾರಿಗಳಾಗಲಿ ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಈ ದುರ್ಘಟನೆ ಸಂಭವಿಸಿದೆ.
ಇದರ ವಿರುದ್ಧ ಪ್ರತಿಭಟನಾ ನಿರತರು ಹಾಗೂ ವಿವಿಧ ಸಂಘಟಕರು ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಒಟ್ಟಾರೆ ಈ ಸಾವಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಹೇಳಲಾಗಿದೆ.