ಇತ್ತೀಚಿನ ಸುದ್ದಿ
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ: ಕಾಂಗ್ರೆಸ್ ನಿಂದಲೂ ಹೊಸ ಮುಖ?; ಪದ್ಮರಾಜ್ ಆರ್. ಕೈ ಅಭ್ಯರ್ಥಿ?
15/03/2024, 17:19
ಮಂಗಳೂರು(reporterkarnataka.com):ಮುಂಬರುವ ಸಂಸತ್ ಚುನಾವಣೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಈಗಾಗಲೇ ಬಿಜೆಪಿ ಹೊಸ ಮುಖವನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಕೂಡ ಹೊಸಬರಿಗೆ ಮಣೆ ಹಾಕಲಿದೆ ಎಂದು ತಿಳಿದು ಬಂದಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಮಂಗಳೂರಿನ ಯುವ ವಕೀಲ ಪದ್ಮರಾಜ್ ಆರ್. ಅವರನ್ನು ಕಾಂಗ್ರೆಸ್ ಅಖಾಡಕ್ಕಿಳಿಸಲಿದೆ.
ಪದ್ಮರಾಜ್ ಅವರ ಹೆಸರನ್ನು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಅಂತಿಮಗೊಳಿಸಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಪದ್ಮರಾಜ್ ರಾಮಯ್ಯ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ .
ಕೆಪಿಸಿಸಿಯಿಂದ ಕಾಂಗ್ರೆಸ್ ಹೈಕಮಾಂಡ್ ಗೆ ರವಾನೆಯಾದ ಪಟ್ಟಿಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಪದ್ಮರಾಜ್ ಅವರ ಹೆಸರಿತ್ತು. ಸೊರಕೆ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬ್ಯಾಟಿಂಗ್ ಮಾಡಿದ್ದರು ಎನ್ನಲಾಗಿದೆ. ಸಿದ್ದರಾಮಯ್ಯ ಅವರ ಮೊದಲ ಸರಕಾರದಲ್ಲಿ ಸಚಿವ ಸಂಪುಟದಿಂದ ಸೊರಕೆ ಅವರನ್ನು ಕೈಬಿಟ್ಟಿರುವುದಕ್ಕೆ ಈ ಬಾರಿ ಲೋಕಸಭೆ ಟಿಕೆಟ್ ಕೊಡಿಸಲು ಸಿಎಂ ಮುಂದಾಗಿದ್ದರು ಎನ್ನಲಾಗಿದೆ. ಆದರೆ ಹೈಕಮಾಂಡ್ ವಿಧಾನಸಭೆ ಚುನಾವಣೆ ವೇಳೆ ಮಾಡಿದ ವಾಗ್ದಾನ ಮತ್ತು ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರವನ್ನು ಈ ಬಾರಿ ಹೇಗಾದರೂ ಗೆಲ್ಲಲ್ಲೇ ಬೇಕೆನ್ನುವ ಹಠದ ಹಿನ್ನೆಲೆಯಲ್ಲಿ ಸಚ್ಚಾರಿತ್ಯದ ಹೊಸ ಮುಖ ಅನಿವಾರ್ಯ ಎಂದು ಮನಗಂಡಿದೆ. ಈ ಹಿನ್ನೆಲೆಯಲ್ಲಿ ಪದ್ಮರಾಜ್ ಅವರಿಗೆ ಟಿಕೆಟ್ ಗ್ಯಾರಂಟಿ ಎನ್ನಲಾಗಿದೆ. ಅದಲ್ಲದೆ ಪದ್ಮರಾಜ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಜನಸಂಖ್ಯೆಯನ್ನು ಹೊಂದಿದ ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದಾರೆ.