ಇತ್ತೀಚಿನ ಸುದ್ದಿ
ಮಂಗಳೂರು ಧರ್ಮಪ್ರಾಂತ್ಯದ ಕ್ರೈಸ್ತ ಚರ್ಚ್ ಗಳಲ್ಲಿ ಬೂದಿ ಬುಧವಾರ ಆಚರಣೆ: ಈಸ್ಟರ್ ವರೆಗೆ ವಿಶೇಷ ಪ್ರಾರ್ಥನೆ
14/02/2024, 17:05
ಮಂಗಳೂರು(reporterkarnataka.com): ಯೇಸು ಕ್ರಿಸ್ತರ 40 ದಿನಗಳ ತಪಸ್ಸು ಕಾಲ(ಕಪ್ಪು ದಿನ)ದ ಆರಂಭದ ಅಂಗವಾಗಿ ಬುಧವಾರ ಮಂಗಳೂರು ಧರ್ಮಪ್ರಾಂತ್ಯದ ಕ್ರೈಸ್ತ ಚರ್ಚ್ ಗಳಲ್ಲಿ ಬೂದಿ ಬುಧವಾರ ಆಚರಣೆ ನಡೆಯಿತು.
ಈ 40 ದಿನಗಳಲ್ಲಿ ಕ್ರೈಸ್ತರು ತ್ಯಾಗ, ಪ್ರಾರ್ಥನೆಯನ್ನು ಮಾಡುತ್ತಾರೆ. ನಗರದ ಉರ್ವ ಚರ್ಚ್‍ನಲ್ಲಿ ಧರ್ಮಗುರು ಫಾ.ಬೆಂಜಮಿನ್ ಪಿಂಟೋ ಅವರು ಭಕ್ತರಿಗೆ ಬೂದಿಯ ಶಿಲುಬೆ ಗುರುತು ಹಾಕುವ ಮೂಲಕ ತಪಸ್ಸು ಕಾಲಕ್ಕೆ ಮುನ್ನುಡಿ ಬರೆದರು.
ಮಂಗಳೂರು ಮಾತ್ರವಲ್ಲದೆ ಇಡೀ ವಿಶ್ವದ ಕ್ರೈಸ್ತ ಬಂಧುಗಳು ಬೂದಿ ಬುಧವಾರದ ಮೂಲಕ ಕಪ್ಪು ದಿನ( ಬ್ಲ್ಯಾಕ್ ಡೇಸ್) ಆಚರಣೆ ಆರಂಭಿಸುತ್ತಾರೆ. ಈ ಬೂದಿ ಬುಧವಾರದ ವಿಶೇಷತೆ ಎಂದರೆ ಎಲ್ಲ ಚರ್ಚ್‌ಗಳಲ್ಲಿ ಬುಧವಾರ ಬೆಳಗ್ಗೆ ಹಾಗೂ ಸಂಜೆ ವಿಶೇಷ ಪೂಜೆಯ ಜತೆಗೆ ಬೂದಿಯಲ್ಲಿ ಶಿಲುಬೆಯ ಚಿಹ್ನೆಯನ್ನು ಭಕ್ತರಿಗೆ ಹಾಕಲಾಗುತ್ತದೆ. ಆ ಮೂಲಕ ಕಪ್ಪು ದಿನದ ಆಚರಣೆಗೆ ಚಾಲನೆ ಸಿಗುತ್ತದೆ. ಕ್ರೈಸ್ತರು ಬುಧವಾರ ವಿಶೇಷವಾದ ಪ್ರಾರ್ಥನೆ, ಉಪವಾಸದ ಮೂಲಕ ಈ ದಿನವನ್ನು ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ. ಇನ್ನು 40 ದಿನಗಳ ಕಾಲ ಪ್ರಾರ್ಥನೆ, ತ್ಯಾಗದ ಬದುಕಿನ ಹಾದಿಯಲ್ಲಿ ಕ್ರೈಸ್ತರು ಸಾಗುತ್ತಾರೆ. ಈಸ್ಟರ್ ಹಬ್ಬದ ಮೂಲಕ ಈ ಕಪ್ಪು ದಿನಕ್ಕೆ ಪೂರ್ಣ ವಿರಾಮ ಸಿಗಲಿದೆ.