ಇತ್ತೀಚಿನ ಸುದ್ದಿ
ಮುಲ್ಕಿ: ಇಸ್ಪೀಟ್ ಅಡ್ಡೆಗೆ ಸಿಸಿಬಿ ಪೊಲೀಸರ ದಾಳಿ: 29 ಮಂದಿ ಬಂಧನ, 1.75 ಲಕ್ಷ ರೂ. ನಗದು, ಸೊತ್ತು ವಶ
21/01/2024, 19:46
ಮಂಗಳೂರು(reporterkarnataka.com): ಮಂಗಳೂರು ಸಿಸಿಬಿ ಪೊಲೀಸರು ಮುಲ್ಕಿ ಸಮೀಪ
ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್(ಉಲಾಯಿ-ಪಿದಾಯಿ) ಜೂಜಾಟವಾಡುತ್ತಿದ್ದ 29 ಜನರ ಬಂಧಿಸಿದ್ದಾರೆ.
ಮೂಲ್ಕಿ ಪೊಲೀಸ್ ಠಾಣಾ ಸರಹದ್ದಿನ ಮಂಗಳೂರು ತಾಲೂಕು ಕಿಲ್ಪಾಡಿ ಗ್ರಾಮದ ಬಂಡಸಾಲೆ ಎಂಬಲ್ಲಿ ಮನೆಯೊಂದರಲ್ಲಿ ಕೆಲವು ಜನರು ಸೇರಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜೂಜಾಟ ಆಡುತ್ತಿದ್ದಾರೆಂದು ಖಚಿತ ಮಾಹಿತಿ ಮೇರೆಗೆ ಬೆಳಗಿನ ಜಾವ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅಂದರ್-ಬಾಹರ್(ಉಲಾಯಿ-ಪಿದಾಯಿ) ಎಂಬ ಅದೃಷ್ಟದ ಜೂಜಾಟವನ್ನು ಆಡುತ್ತಿದ್ದರು. ಆರೋಪಿಗಳಿಂದ 1,75,450/- ರೂ ನಗದು ಹಣ ಹಾಗೂ ಆಟಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೂಜಾಟವನ್ನು ನಿತ್ಯಾನಂದ , ವಿಲ್ಫ್ರೇಡ್ ಮತ್ತು ರೆಹಮಾನ್ ಎಂಬವರು ತಮ್ಮ ಲಾಭಕ್ಕೋಸ್ಕರ ಆಡಿಸುತ್ತಿದ್ದರು. ನಿತ್ಯಾನಂದ ಮತ್ತು ರೆಹಮಾನ್ ಓಡಿ ಹೋಗಿ ತಪ್ಪಿಸಿಕೊಂಡಿರುತ್ತಾರೆ. ಪತ್ತೆ ಕಾರ್ಯವನ್ನು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಅವರ ತಂಡ ನಡೆದಿದೆ.