ಇತ್ತೀಚಿನ ಸುದ್ದಿ
ನಿಗಮ- ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ, ನನ್ನ ಪರಿಗಣಿಸಬೇಡಿ: ಸಿಎಂ ಸಿದ್ದರಾಮಯ್ಯಗೆ ಚಳ್ಳಕೆರೆ ಶಾಸಕ ರಘುಮೂರ್ತಿ ಪತ್ರ
13/01/2024, 12:48

ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಸಚಿವಗಿರಿ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳಿಗಾಗಿ ತೀವ್ರ ಲಾಬಿ ನಡೆಯುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಶಾಸಕರೊಬ್ಬರು ನನ್ನನ್ನು ನಿಗಮ- ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಡಿ, ನಾನು ಆಕಾಂಕ್ಷಿಯಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅವರೇ
ಚಳ್ಳಕೆರೆ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ.
ರಘುಮೂರ್ತಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಆ ಪತ್ರದ ಒಕ್ಕಣೆಯಲ್ಲಿ ನಾನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಪರಿಗಣಿಸಬೇಡಿ ಎಂದು ರಘುಮೂರ್ತಿ ಅವರು ಸೌಜನ್ಯದಿಂದ ಪಕ್ಷದ ನಾಯಕರನ್ನು ಭಿನ್ನಹಿಸಿಕೊಂಡಿದ್ದಾರೆ.
ನಿಗಮ ಮಂಡಳಿ ಪಟ್ಟಿ ಪ್ರಕಟಿಸುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ಶಾಸಕರು ಈ ಪತ್ರ ಬರೆದಿದ್ದು, ”ನನ್ನನ್ನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಡಿ.
ಕಾಂಗ್ರೆಸ್ ಪಕ್ಷ 3 ಬಾರಿ ಸ್ಪರ್ಧೆಗೆ ಅವಕಾಶ ನೀಡಿದೆ. ವರಿಷ್ಠರಿಗೆ, ಕಾರ್ಯಕರ್ತರಿಗೆ ನಾನು ಋಣಿಯಾಗಿರುವೆ. ನಾನು ಸರಕಾರದಿಂದ ಸಹಕಾರ ನಿರೀಕ್ಷಿಸುವೆ, ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಡಿ. ಯಾವುದೇ ಸಮಯದಲ್ಲಿ ಪಕ್ಷಕ್ಕೆ ಮುಜುಗರ ಆಗದ ರೀತಿ ನಡೆದುಕೊಳ್ಳುವೆ” ಎಂದು ಬರೆದಿದ್ದಾರೆ.
ಒಂದೆಡೆ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳಿಗಾಗಿ ತೀವ್ರ ಲಾಬಿ ನಡೆಯುತ್ತಿರುವ ವೇಳೆಯಲ್ಲಿ ರಘುಮೂರ್ತಿ ನನಗೆ ಬೇಡ ಎಂದು ಪತ್ರ ಬರೆದು ಗಮನಸೆಳೆದಿದ್ದಾರೆ.