ಇತ್ತೀಚಿನ ಸುದ್ದಿ
ಹಿರಿಯ ಮುಖಂಡ, ಕಾಫಿ ಬೆಳೆಗಾರ ನಾರ್ಬಾಟ್ ಸಾಲ್ದಾನ ನಿಧನ
07/01/2024, 21:24
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಹಿರಿಯ ಮುಖಂಡ, ಕಾಫಿ ಬೆಳೆಗಾರ, ಉದ್ಯಮಿ ನಾರ್ಬಾಟ್ ಸಾಲ್ದಾನ(70)ನಿಧನರಾಗಿದ್ದಾರೆ.
ಶನಿವಾರ ಬೆಳಿಗ್ಗೆ ಸುಮಾರು 10-30ರ ಹೊತ್ತಿಗೆ ಮೂಡಿಗೆರೆ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿರುವ ತಮ್ಮ ಕಾಫಿ ಎಸ್ಟೇಟ್ ನಲ್ಲಿ ಮನೆಯ ಸಮೀಪ ಅಚಾನಕ್ಕಾಗಿ ಬಿದ್ದು ಗಾಯಗೊಂಡಿದ್ದರು ಎನ್ನಲಾಗಿದೆ. ಅವರ ತಲೆ ಮತ್ತು ಕಣ್ಣಿನ ಭಾಗಕ್ಕೆ ಗಾಯವಾಗಿತ್ತು. ತಕ್ಷಣ ಅವರನ್ನು ಬಣಕಲ್ ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಅವರು ದಾರಿಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ನಾರ್ಬಾಟ್ ಸಾಲ್ದಾನ ಅವರು ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಕಾಫಿ ಬೆಳೆಗಾರರಲ್ಲಿ ಒಬ್ಬರಾಗಿದ್ದರು. ಹಲವು ಕಡೆಗಳಲ್ಲಿ ಅವರು ಕಾಫಿ ಎಸ್ಟೇಟ್ ಹೊಂದಿದ್ದರು. ಕಾಫಿ ಉದ್ದಿಮೆದಾರರಾಗಿಯೂ ಹೆಸರು ಮಾಡಿದ್ದರು. ಅವರ ಕುಟುಂಬ ಬೇಲೂರಿನಲ್ಲಿ ಕಾಫಿ ಕ್ಯೂರಿಂಗ್ ನಡೆಸುತ್ತಿದೆ. ಮೂಡಿಗೆರೆ ಪಟ್ಟಣದಲ್ಲಿ ಕುಂದೂರು ಕಾಂಪ್ಲೆಕ್ಸ್, ಸಿಂಡಿಕೇಟ್ ಬ್ಯಾಂಕ್ ಕಟ್ಟಡ ಸೇರಿದಂತೆ ಅನೇಕ ವಾಣಿಜ್ಯ ಕಟ್ಟಡಗಳ ಮಾಲೀಕರಾಗಿರುತ್ತಾರೆ.
ರಾಜಕೀಯವಾಗಿ ಅವರು ಕಾಂಗ್ರೇಸ್ ಪಕ್ಷದಲ್ಲಿ ಗುರುತಿಸಿಕೊಂಡು ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಕುಂದೂರು ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಮೂಡಿಗೆರೆ ಬೆಳೆಗಾರರ ಸಂಘದ ನಿರ್ದೇಶಕರಾಗಿದ್ದರು.
ಕೊಡುಗೈ ದಾನಿಗಳಾಗಿದ್ದ ನಾರ್ಬಾಟ್ ಸಾಲ್ದಾನ ಬಣಕಲ್ ನಝರತ್ ಶಾಲೆಗೆ ಭೂಮಿ ದಾನ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳಿಗೆ, ಸಾಮಾಜಿಕ ಕಾರ್ಯಗಳಿಗೆ ಉದಾರವಾಗಿ ದಾನವನ್ನು ನೀಡಿದ್ದಾರೆ.
ನಾರ್ಬಾಟ್ ಸಾಲ್ದಾನ ಅವರು ಅತ್ಯಂತ ಸರಳ ವ್ಯಕ್ತಿತ್ವದವರಾಗಿದ್ದರು. ಕುಂದೂರು ಸುತ್ತಮುತ್ತಲ ಪ್ರದೇಶಗಳ ಜನರೊಂದಿಗೆ ಅವರು ತುಂಬಾ ಪ್ರೀತಿ ವಿಶ್ವಾಸದಿಂದ ಇದ್ದರು. ಸ್ಥಳೀಯರ ಕಷ್ಟಸುಖಗಳಲ್ಲಿ ಸದಾ ಭಾಗಿಯಾಗುತ್ತಿದ್ದರು. ಇವರ ನಿಧನದ ಸುದ್ದಿ ಕೇಳಿ ಕುಂದೂರು ಸುತ್ತಮುತ್ತಲ ಗ್ರಾಮಸ್ಥರು, ಇವರ ಸ್ನೇಹಿತರು, ಬಂಧುಗಳು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಸದ್ಯ ಅವರ ಪಾರ್ಥೀವ ಶರೀರ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಇದ್ದು, ಅವರ ಅಂತ್ಯಸಂಸ್ಕಾರದ ದಿನಾಂಕ ಮತ್ತು ಸ್ಥಳಕ್ಕೆ ಬಗ್ಗೆ ಇದುವರೆಗೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.