ಇತ್ತೀಚಿನ ಸುದ್ದಿ
ಅಕ್ರಮ ಮರಳು ಸಾಗಾಟಕ್ಕೆ ಲಂಚ: ಲೋಕಾಯುಕ್ತ ಬಲೆಗೆ ತಹಶೀಲ್ದಾರ್, ಜೀಪ್ ಚಾಲಕ ಕೂಡ ಅಂದರ್
06/01/2024, 11:38

ಹಾವೇರಿ(reporterkarnataka.com): ಅಕ್ರಮ ಮರಳು ಸಾಗಾಟಕ್ಕೆ ಅವಕಾಶ ನೀಡಲು ಲಂಚ ಪಡೆಯುತ್ತಿದ್ದ ವೇಳೆ ರಾಣಿಬೆನ್ನೂರು ತಹಶೀಲ್ದಾರ್ ಹಾಗೂ ಚಾಲಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜೀಪ್ ಚಾಲಕ ಲಂಚ ಹಣ ಪಡೆದುಕೊಂಡು ರಾಣಿಬೆನ್ನೂರು ನಗರದ ವೀರಭದ್ರೇಶ್ವರ ಬಡಾವಣೆಯಲ್ಲಿರುವ ಮನೆಯಲ್ಲಿ ತಹಶೀಲ್ದಾರ್ ಹನುಮಂತ ಶಿರಹಟ್ಟಿ ಅವರಿಗೆ ಕೊಡುವ ವೇಳೆ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ತಹಶೀಲ್ದಾರ್ ಅವರು ರಾಣಿಬೆನ್ನೂರಿನ ಮಂಜುನಾಥ ವಾಲೀಕಾರ ಅವರಿಗೆ ಸೇರಿದ ಲಾರಿಯಲ್ಲಿ ಅಕ್ರಮ ಮರಳು ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಲಾರಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಎರಡು ಲಾರಿಗಳನ್ನು ಬಿಡುಗಡೆ ಮಾಡಲು ತಹಶೀಲ್ದಾರ್ ಹನುಮಂತ ಅವರು 12 ಸಾವಿರ ರೂ. ಲಂಚ ಬೇಡಿಕೆ ಇಟ್ಟಿದ್ದರು. ತಹಶೀಲ್ದಾರ್ ಚಾಲಕ ಲಂಚ ಹಣ ಪಡೆದುಕೊಂಡು ತಹಶೀಲ್ದಾರ್ ಅವರ ಮನೆಗೆ ಬಂದು ಹಣ ನೀಡುತ್ತಿದ್ದಾಗ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದರು.