ಇತ್ತೀಚಿನ ಸುದ್ದಿ
ನಾವು ಹೆಂಗೆ ಹಿಂದೂ ವಿರೋಧಿಗಳು? ರಾಜ್ಯದ ಬಹುತೇಕ ಹಿಂದೂಗಳೇ ಬಿಜೆಪಿ ತಿರಸ್ಕರಿಸಿ, ಕಾಂಗ್ರೆಸ್ ಆಯ್ಕೆ ಮಾಡಿದ್ದು: ಗೃಹ ಸಚಿವ ಡಾ. ಪರಮೇಶ್ವರ್ ತಿರುಗೇಟು
05/01/2024, 15:04

ಮೃದುಲಾ ನಾಯರ್ ಬೆಂಗಳೂರು
info.reporterkarnataka@gmail.com
ರಾಜ್ಯದಲ್ಲಿ ಬಿಜೆಪಿ ಆಡಳಿತವನ್ನು ತಿರಸ್ಕರಿಸಿ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿರುವ ಜನರಲ್ಲಿ ಹೆಚ್ಚಿನರು ಹಿಂದೂಗಳೇ ಆಗಿದ್ದಾರೆ. ಹಾಗಿರುವಾಗ ನಾವು ಹೇಗೆ ಹಿಂದೂ ವಿರೋಧಿ ಆಗುತ್ತೇವೆ? ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿದರು.
ಸುಮ್ಮನೇ ಬಿಜೆಪಿ ನಾಯಕರು ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಏನೇ ಆರೋಪ ಮಾಡುವುದಕ್ಕೂ ಒಂದು ಮಿತಿ ಇರಬೇಕು. ಇಂತಹ ವಿಷಯಗಳಲ್ಲಿ ನಾವು ನ್ಯಾಯವಾಗಿ ಹೋಗಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ದತ್ತಪೀಠ ಹೋರಾಟಗಾರರ ವಿರುದ್ಧದ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವರು,ನಾವು ಕೇಸ್ ರೀ ಓಪನ್ ಮಾಡಿಲ್ಲ. ಪೊಲೀಸ್ ಠಾಣೆಯಲ್ಲಿ ಇರುವ ಪ್ರಕರಣಗಳ ವಿರುದ್ಧ ಅಧಿಕಾರಿ ಕ್ರಮ ತೆಗೆದುಕೊಳ್ಳಲು ಹೋದರೆ ರೀ ಓಪನ್ ಮಾಡಿದ್ದೀರಾ ಅಂತ ಕೇಳಿದರೆ ಹೇಗೆ? ಕೋರ್ಟ್ ಸೂಚನೆ ಕೊಟ್ಟಿದ್ದರೆ ನಾವು ಕೇಳಬಾರದಾ? ಬಿಜೆಪಿಯವರು ಕೋರ್ಟ್, ಕಾನೂನಿಗೂ ಬೆಲೆ ಕೊಡುವುದಿಲ್ಲ ಎಂದು ಕಿಡಿ ಕಾರಿದರು.
ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ ಬಂಧನ ಬಗ್ಗೆ ಮಾತನಾಡಿದ ಅವರು,16 ಪ್ರಕರಣಗಳಲ್ಲಿ ಭಾಗಿಯಾಗಿರುವ ಈತನ ವಿಷಯವನ್ನು ಇಡೀ ದೇಶದಲ್ಲಿ ದೊಡ್ಡದು ಮಾಡಲು ಬಿಜೆಪಿಯವರು ಹೊರಟಿದ್ದಾರೆ. ಇದರ ಅರ್ಥ ಬಿಜೆಪಿಯವರು ಅಪರಾಧಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಅರ್ಥ. 9 ಸಾರಾಯಿ ಕೇಸ್ ಸೇರಿದಂತೆ ಬೇರೆ ಬೇರೆ ಪ್ರಕರಣಗಳು ಆತನ ಮೇಲಿದೆ ಎಂದು ವಿವರಿಸಿದರು.
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ಇತ್ತು, ಊಟ ಮಾಡಿ ಬಂದೆ. ರಾಜಕೀಯ ಬಗ್ಗೆಯೂ ಚರ್ಚೆ ಆಗಿದೆ. ಅದನ್ನು ಬಹಿರಂಗಪಡಿಸಲು ಆಗುತ್ತಾ? ನಾವು ರಾಜಕಾರಣಿಗಳು, ರಾಜಕೀಯ ಬಗ್ಗೆ ಮಾತಾಡಿಯೇ ಇರುತ್ತೇವೆ ಎಂದು ಹೇಳಿದರು.