ಇತ್ತೀಚಿನ ಸುದ್ದಿ
ಕೆರೆಗೆ ಹಾರವಾರ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂಧನ
06/08/2021, 20:42
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಂಕುಸದೊಡ್ಡಿ ಗ್ರಾಮದ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕ ತಾನು ಕೆಲಸ ಮಾಡುತ್ತಿದ್ದ ಕೆರೆಗೆ ಆಹುತಿಯಾದ ದಾರುಣ ಘಟನೆ ನಡೆದಿದೆ. ಉದ್ಯೋಗ ಖಾತ್ರಿ ಕಾರ್ಮಿಕ ನಾಗೇಶ್(55)ಎಂಬವರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದ್ದು, ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.
ಸಾನಬಾಳ ಕೆರೆಯ ಕೆಲಸ ಮಾಡಲು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಾಗೇಶ ಎನ್ನುವ ಅಂಕುಶದೊಡ್ಡಿ ಗ್ರಾಮದ ನಿವಾಸಿ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದರು.
ಮಧ್ಯಾಹ್ನದವರೆಗೆ ಕೆಲಸ ಮಾಡಿದ್ದಾರೆ. ಹಾಜರಾತಿ ಹಾಕಿದ್ದಾರೆ.
ಕಾಮಗಾರಿ ಮುಗಿಸಿ ಕೆಲಸಕ್ಕೆ ಬಂದಿದ್ದ ಸುಮಾರು 800ಕ್ಕೂ ಅಧಿಕ ಕೂಲಿ ಕಾರ್ಮಿಕರು ಮನೆಗೆ ತೆರಳಿದ್ದಾರೆ. ಆದರೆ ಸಂಜೆಯಾದರೂ ನಾಗೇಶ್ ಅವರು ಮನೆಗೆ ಹೋಗದ ಕಾರಣ ಗಾಬರಿಗೊಂಡ ಕುಟುಂಬಸ್ಥರು ಮತ್ತೆ ಕೆಲಸದ ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದ್ದಾರೆ. ಅದರೆ ಯಾವುದೇ ಸುಳಿವು ಸಿಗದ ಕಾರಣ ರಾತ್ರಿಯಿಡಿ ಎಲ್ಲಾ ಕಡೆಗೆ ಹುಡುಕಾಟ ನಡೆಸಿದ್ದಾರೆ. ಆದರೆ ಇಂದು ಸಾನಬಾಳ ಕೆರೆಯಲ್ಲಿ ನಾಗೇಶ ಅವರ ಶವ ನೀರಿನಲ್ಲಿ ತೇಲುವುದು ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿ ಪತ್ನಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನಾ ಸ್ಥಳಕ್ಕೆ ಆಗಮಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್ ಪಾಟೀಲ್ ಜೈ ವೀರೇಶ್ ಆರಕ್ಷಕ ಠಾಣೆಗೆ ದೂರು ದಾಖಲಿಸಿದ್ದಾರೆ .ಮಸ್ಕಿ ವಿಭಾಗದ ಪಿಎಸ್ಐ ಭೀಮ ದಾಸ್ ಧಾವಿಸಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಮಸ್ಕಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಉದ್ಯೋಗ ಖಾತ್ರಿ ಕೂಲಿ ಕೆಲಸಕ್ಕೆ ಬಂದ ಗಂಡ ಮನೆಗೆ ಬರಲಿಲ್ಲ.ನಮ್ಮ ಕುಟುಂಬಕ್ಕೆ ಆಧಾರವಾಗಿದ್ದ ಗಂಡ ಹೀಗೆ ಶವವಾಗಿ ಪತ್ತೆಯಾಗಿರುವುದು ಆಕಾಶ ಕಳಚಿದಂತಾಗಿದೆ .ನಾಲ್ಕು ಮಕ್ಕಳನ್ನು ನಾನೀಗ ಹೇಗೆ ಸಾಕಬೇಕೆಂದು ನಾಗೇಶ ಅವರ ಪತ್ನಿ ಕಣ್ಣೀರು ಹಾಕಿದರು.
ಅಭಿವೃದ್ಧಿ ಅಧಿಕಾರಿ ಸುರೇಶ್ ಪಾಟೀಲ್ ಮಾತನಾಡಿ, ದೂರು ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮುಂದಿನ ಪರಿಹಾರ ನೆರವು ಕಾರ್ಯಕ್ರಮಕ್ಕಾಗಿ ಯೋಚಿಸಲಾಗುವುದು ಎಂದು ಹೇಳಿದರು.