ಇತ್ತೀಚಿನ ಸುದ್ದಿ
ಚೆಕ್ ಬೌನ್ಸ್ ಪ್ರಕರಣ: ಸಚಿವ ಮಧು ಬಂಗಾರಪ್ಪ ದೋಷಿ; ವಿಶೇಷ ಕೋರ್ಟ್ ನಿಂದ 6.96 ಕೋಟಿ ರೂ. ದಂಡ
30/12/2023, 11:29
ಬೆಂಗಳೂರು(reporterkarnataka.com):ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಜನಪ್ರತಿನಿಧಿಗಳ ಸ್ಪೆಷಲ್ ಕೋರ್ಟ್ 6.96 ಕೋಟಿ ರೂ. ದಂಡ ವಿಧಿಸಿ ತೀರ್ಥ ನೀಡಿದೆ.
ಆಕಾಶ್ ಆಡಿಯೋ ಕಂಪನಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ
ಸಚಿವರು ದಂಡ ಮೊತ್ತವನ್ನು ಪಾವತಿಸಲು ವಿಫಲರಾದರೆ 6 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುವುದಾಗಿ ಕೋರ್ಟ್ ಹೇಳಿದೆ.
ಮಧು ಬಂಗಾರಪ್ಪ ಅವರು 2011ರಲ್ಲಿ ಆಕಾಶ್ ಆಡಿಯೋ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಂದರ್ಭ ರಾಜೇಶ್ ಎಕ್ಸ್‌ಪೋರ್ಟ್ ಸಂಸ್ಥೆಗೆ 6.6 ಕೋಟಿ ರೂಪಾಯಿ ಚೆಕ್ ನೀಡಿದ್ದರಂತೆ. ಆದರೆ ಆ ಚೆಕ್ ಬೌನ್ಸ್ ಆಗಿದ್ದರಿಂದ ಮಧು ಬಂಗಾರಪ್ಪ ವಿರುದ್ಧ ರಾಜೇಶ್ ಎಕ್ಸ್‌ಪೋರ್ಟ್ ಸಂಸ್ಥೆ ದೂರು ನೀಡಿತ್ತು. ಇದೆಲ್ಲದರ ನಡುವೆ ಮಧು ಬಂಗಾರಪ್ಪ ಅವರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿ 2011ರಲ್ಲಿ ಜನಪ್ರತಿನಿಧಿಗಳ ಕೋರ್ಟ್ ಮಧು ಬಂಗಾರಪ್ಪ ಅವರಿಗೆ ಜಾಮೀನು ಕೂಡ ನೀಡಿತ್ತು.
2024ರ ಜನವರಿ 30 ರೊಳಗೆ 6.10 ಕೋಟಿ ರೂ. ಪಾವತಿಸುವುದಾಗಿ ಮಧು ಬಂಗಾರಪ್ಪ ಮುಚ್ಚಳಿಕೆ ಬರೆದುಕೊಟ್ಟಿದ್ದು, ಅಂದರೆ ತಾನು ಕೊಡಬೇಕಾಗಿರುವ 6.60 ಕೋಟಿ ರೂ.ನಲ್ಲಿ 50 ಲಕ್ಷ ರೂ.ವನ್ನು ಮೊದಲೇ ನೀಡಿರುವ ಹಿನ್ನೆಲೆ 6.10 ಕೋಟಿ ರೂ. ಮಾತ್ರ ನೀಡುವುದಾಗಿ ತಿಳಿಸಿದ್ದರು. ಆದರೆ, ಮಧು ಬಂಗಾರಪ್ಪ ನೀಡಿದ್ದ ಮುಚ್ಚಳಿಕೆ ಪಾಲಿಸದ ಹಿನ್ನೆಲೆ ನ್ಯಾಯಾಧೀಶರಾದ ಜೆ.ಪ್ರೀತ್ ಅವರು ದಂಡ ಮತ್ತು ಶಿಕ್ಷೆಯ ಆದೇಶ ನೀಡಿದ್ದಾರೆ. ಹೀಗಾಗಿ, ಕೋರ್ಟ್ ಆದೇಶಿಸಿದ 6, 96,70000 ರೂಪಾಯಿಯಲ್ಲಿ 10 ಸಾವಿರ ರೂ.ಯನ್ನು ಕೋರ್ಟ್‌ಗೆ ದಂಡದ ರೂಪದಲ್ಲಿ ಮಧು ಬಂಗಾರಪ್ಪ ಅವರು ಪಾವತಿ ಮಾಡಬೇಕು. ದೂರುದಾರರಿಗೆ ಇನ್ನುಳಿದ ಮೊತ್ತವನ್ನು ನೀಡಲು ಕೋರ್ಟ್ ಆದೇಶ ಹೊರಡಿಸಿದೆ.