ಇತ್ತೀಚಿನ ಸುದ್ದಿ
ಬೀದಿಬದಿ ವ್ಯಾಪಾರಿಗಳಿಂದ ಸಂಭ್ರಮದ ಸೌಹಾರ್ದ ಕ್ರಿಸ್ಮಸ್ ಆಚರಣೆ
23/12/2023, 15:29
ಮಂಗಳೂರು(reporterkarnataka.com):ಯೇಸು ಕ್ರಿಸ್ತರ ಪ್ರೀತಿ ಮತ್ತು ಕಾರುಣ್ಯದ ಸಂದೇಶ ಸಮಾಜಕ್ಕೆ ದಾರಿದೀಪವಾಗಿದೆ. ಹಬ್ಬಗಳನ್ನು ಎಲ್ಲ ಜನರು ಸೇರಿಕೊಂಡು ಆಚರಿಸಿದಾಗ ಸಮಾಜದಲ್ಲಿ ಶಾಂತಿ ಸಾಮರಸ್ಯವನ್ನು ಗಟ್ಟಿಯಾಗಿಡಲು ಸಾಧ್ಯ ಆಗಲಿದೆ ಎಂದು ಹಿರಿಯ ಪತ್ರಕರ್ತ ತಾರಾನಾಥ್ ಗಟ್ಟಿ ಕಾಪಿಕಾಡ್ ಹೇಳಿದರು.
ಅವರು ಇಂದು ಬೀದಿ ವ್ಯಾಪಾರಿಗಳ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ ಮತ್ತು ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ (ನಿ) ಇದರ ಸಹಾಭಾಗಿತ್ವದಲ್ಲಿ ನಡೆದ ಸೌಹಾರ್ದ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಬೀದಿಬದಿ ವ್ಯಾಪಾರಿಗಳು ಅತ್ಯಂತ ಶ್ರಮಜೀವಿಗಳು ಅಭದ್ರತೆಯಲ್ಲಿ ಬದುಕುತ್ತಿರುವವರು ವ್ಯಾಪಾರದಲ್ಲಿ ವ್ಯಾಪಾರ ಧರ್ಮ, ನ್ಯಾಯ, ನಿಷ್ಠೆ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಸಮಾಜ ಗುರುತಿಸುವಂತೆ ಜೀವನ ನಡೆಸಬೇಕೆಂದು ಕರೆ ನೀಡಿದರು.
ಮತ್ತೋರ್ವ ಮುಖ್ಯ ಅತಿಥಿ ಪದುವ ಪ್ರೌಢ ಶಾಲೆಯ ಶಿಕ್ಷಕ ಸ್ಟ್ಯಾನಿ ತಾವ್ರೊ ಮಾತನಾಡುತ್ತಾ ನಿನ್ನ ಶತ್ರುಗಳನ್ನು ಪ್ರೀತಿಸು, ನಿನ್ನನ್ನು ದ್ವೇಷಿಸುವವರಿಗೆ ಒಳಿತನ್ನು ಬಯಸಬೇಕೆಂದು ಮಾನವ ಜನಾಂಗಕ್ಕೆ ಸಾರಿ ಹೇಳಿದ ಯೇಸು ಕ್ರಿಸ್ತರು ಸಕಲ ಮಾನವರಿಗೆ ಭ್ರಾತೃತ್ವದ ಸಂದೇಶ ನೀಡಿದ ಮಹಾನ್ ಶಕ್ತಿಯಾಗಿದ್ದಾರೆ. ಬೀದಿ ವ್ಯಾಪಾರಿಗಳು ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸುವ ಮೂಲಕ ಮಂಗಳೂರಿನ ನಿಜವಾದ ಸೌಹಾರ್ದತೆಯ ರಾಯಭಾರಿಗಳಾಗಿದ್ದೀರಿ ಬೀದಿ ವ್ಯಾಪಾರಿಗಳಲ್ಲಿರುವ ಸಾಮರಸ್ಯದ ಸದ್ಭಾವನೆ ಸರ್ವರಿಗೂ ಅನುಕರಣೀಯ ಎಂದರು.
ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷರಾದ ನವೀನ್ ಕೊಂಚಾಡಿ, ಸಂಘದ ಗೌರವಧ್ಯಕ್ಷ ರಾದ ಬಿ.ಕೆ ಇಮ್ತಿಯಾಝ್ ಕ್ರಿಸ್ಮಸ್ ಹಬ್ಬಕ್ಕೆ ಶುಭ ಕೋರಿ ಮಾತನಾಡಿದರು.
ಸಂಘದ ಅಧ್ಯಕ್ಷರಾದ ಮೊಹಮ್ಮದ್ ಮುಸ್ತಫಾ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಹರೀಶ್ ಪೂಜಾರಿ ಆಸೀಫ್ ಬಾವ ಉರುಮನೆ, ಮೇಬಲ್ ಡಿಸೋಜ, ಮೇರಿ ಡಿಸೋಜ, ಫಿಲೋಮೀನಾ, ಪ್ರವೀಣ್ ಕದ್ರಿ, ನೌಷಾದ್ ಉಳ್ಳಾಲ, ಇಸ್ಮಾಯಿಲ್, ಆದಂ ಬಜಾಲ್, ಶ್ರೀಧರ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.