ಇತ್ತೀಚಿನ ಸುದ್ದಿ
3ನೇ ಅಲೆಯ ಭೀತಿ: ಕೊರೊನಾ ಲಸಿಕೆಗಾಗಿ ಮುಗಿದ ಬಿದ್ದ ನಾಗರಿಕರು: ವೆನ್ಲಾಕ್ ಆಯುಷ್ ಕೇಂದ್ರದಲ್ಲಿ ನೂಕುನುಗ್ಗಲು
03/08/2021, 15:30
ಮಂಗಳೂರು(reporterkarnataka.com): ಕೊರೊನಾ ಲಸಿಕೆ ಪಡೆಯಲು ಮಂಗಳವಾರ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ನೂಕು ನುಗ್ಗಲು ಉಂಟಾಯಿತು. ಕೊರೊನಾ 3ನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಲಸಿಕೆ ಪಡೆದುಕೊಳ್ಳಲು ನಾಗರಿಕರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು.
ಬೆಳಗ್ಗೆ 8 ಗಂಟೆಯಿಂದಲೇ ದೊಡ್ಡ ಸಂಖ್ಯೆಯಲ್ಲಿ ಜನರು ಆಧಾರ್ ಕಾರ್ಡ್, ಮೊಬೈಲ್ ಸಜ್ಜು ಮಾಡಿ
ವೆನ್ಲಾಕ್ ಆಸ್ಪತ್ರೆಯ ಆಯುಷ್ ಕೇಂದ್ರದಲ್ಲಿ ಸೇರಿದ್ದರು. ಕೋವ್ಯಾಕ್ಸಿನ್ ಎರಡನೇ ಡೋಸ್ 400, ಕೋವಿಶೀಲ್ಡ್ ಎರಡನೇ ಡೋಸ್ 200 ಹಾಗೂ ಅನನಿವಾಸಿ ಭಾರತೀಯರಿಗೆ ಕೋವಿಸೀಲ್ಡ್ ಎರಡನೇ ಡೋಸ್ 100 ವಿತರಿಸಲಾಗುವುದು ಎಂದು ಜಿಲ್ಲಾಡಳಿತ ಪ್ರಕಟಣೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬೆಳ್ಳಂಬೆಳಗೆಯೇ ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರು.
ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಟೋಕನ್ ವ್ಯವಸ್ಥೆ ಮಾಡಿ ಉಳಿದವರನ್ನು ಹೊರಗೆ ಕಳುಹಿಸಿದರು. ಲಸಿಕೆ ಪಡೆಯಲು ಬಂದವರಲ್ಲಿ ಶೇ. 75ಕ್ಕಿಂತ ಹೆಚ್ಚು ಜನರು ಲಸಿಕೆ ಇಲ್ಲದೆ ವಾಪಸ್ ಹೋಗ ಬೇಕಾಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 11 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.