ಇತ್ತೀಚಿನ ಸುದ್ದಿ
ಅಗ್ನಿ ದುರಂತಕ್ಕೀಡಾದ ಗಂಗೊಳ್ಳಿ ಬಂದರಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ: ಸುಮಾರು 13 ಕೋಟಿ ನಷ್ಟ ಅಂದಾಜು
17/11/2023, 21:13
ಗಂಗೊಳ್ಳಿ(reporterkarnataka.com): ಗಂಗೊಳ್ಳಿ ಬಂದರು ಅಗ್ನಿ ದುರಂತದಿಂದ ಸುಮಾರು 13 ಕೋಟಿ ನಷ್ಟ ಉಂಟಾಗಿದೆ ಎಂದು ಜಿಲ್ಲಾ ಉಸ್ತುವಾರಿ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಗಂಗೊಳ್ಳಿಯ ಬಂದರಿನಲ್ಲಿ ಅಗ್ನಿ ದುರಂತ ನಡೆದ ಸ್ಥಳಕ್ಕೆ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರೂ ಆಗಿರುವ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಭೇಟಿ ನೀಡಿದರು. ಅಗ್ನಿ ಆಕಸ್ಮಿಕ ನಡೆದ ಸ್ಥಳವನ್ನು ವೀಕ್ಷಿಸಿದ ಸಚಿವರು, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರರೊಂದಿಗೆ ಚರ್ಚೆ ನಡೆಸಿದರು.
ತ್ವರಿತಗತಿಯಲ್ಲಿ ಪರಿಹಾರ:
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು,
ಅಗ್ನಿ ದುರಂತದಿಂದ ಸುಮಾರು 13 ರಿಂದ 15 ಕೋಟಿ ರೂ ನಷ್ಟ ಅಂದಾಜಿಸಲಾಗಿದೆ. ಇನ್ನು 15 ದಿನಗಳಲ್ಲಿ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಸ್ಥಳದಲ್ಲಿದ್ದ ಮೀನುಗಾರರು ಹಾಗೂ ಬೋಟ್ ಕಳೆದುಕೊಂಡ ಮಾಲೀಕರಿಗೆ ಸ್ವಾಂತನ ಹೇಳಿದರು.
9 ಬೋಟ್ ಗಳು, ಎರಡು ದೋಣಿಗಳು ಸಂಪೂರ್ಣ ಸುಟ್ಟಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು, ಈ ಕುರಿತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಮೀನುಗಾರಿಕೆ ಮತ್ತು ಬಂದರು ಸಚಿವರೊಂದಿಗೆ ಚರ್ಚಿಸಿ ಪರಿಹಾರ ಒದಗಿಸಲಾಗುವುದು ಎಂದರು.
ಮುಂದೆ ಇಂತಹ ದುರ್ಘಟನೆ ಮರುಕಳಿಸಬಾರದು. ಮುನ್ನೆಚ್ಚರಿಕೆ ಕ್ರಮವಾಗಿ ಬಂದರಿನಲ್ಲಿ ಅಗ್ನಿ ಶಾಮಕ ದಳ ಸ್ಥಾಪನೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಮುಖಂಡರಾದ ಗೋಪಾಲ ಪೂಜಾರಿ ಉಪಸ್ಥಿತರಿದ್ದರು.