ಇತ್ತೀಚಿನ ಸುದ್ದಿ
ಪುತ್ತೂರಿನ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ: ಇಬ್ಬರು ಆರೋಪಿಗಳು ಪೊಲೀಸರಿಗೆ ಶರಣು: ಇನ್ನೋರ್ವ ಪರಾರಿ
07/11/2023, 11:46
ಪುತ್ತೂರು(reporterkarnataka.com): ಇಲ್ಲಿನ ನೆಹರೂ ನಗರದಲ್ಲಿ ನಡೆದ ಕಲ್ಲೇಗ ಟೈಗರ್ಸ್ ಹುಲಿ ವೇಷ ತಂಡದ ಸಾರಥಿ ಅಕ್ಷಯ್ ಕಲ್ಲೇಗ(24) ಅಮಾನುಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ.
ಕಲ್ಲೇಗ ಟೈಗರ್ಸ್ ಎಂಬ ಹುಲಿ ಮೇಷ ತಂಡವನ್ನು ಮುನ್ನಡೆಸುತ್ತಿದ್ದ ಅಕ್ಷಯ್ ಕಲ್ಲೇಗ ಅವರನ್ನು ತಲವಾರಿನಿಂದ ಕಡಿದು ಹತ್ಯೆ ಮಾಡಲಾಗಿತ್ತು. ನೆಹರೂ ನಗರದಿಂದ ವಿವೇಕಾನಂದ ಕಾಲೇಜಿಗೆ ಹೋಗುವ ರಸ್ತೆಯಲ್ಲಿ ಎಟಿಎಂ ಎದುರು ಅಕ್ಷಯ್ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದರು. ಅಕ್ಷಯ್ ಅವರನ್ನು ಅಟ್ಟಾಡಿಸಿಕೊಂಡು ಹೋಗಿ ತಲವಾರಿನಿಂದ ಕಡಿದು ಕೊಲೆ ಮಾಡಲಾಗಿತ್ತು. ಸೋಮವಾರ ತಡರಾತ್ರಿ ಈ ಕೃತ್ಯ ನಡೆಸಲಾಗಿತ್ತು.
ಅಕ್ಷಯ್ ತಂಡ ಹುಲಿ ಮೇಷದಲ್ಲಿ ಬಹಳಷ್ಟು ಜನಪ್ರಿಯತೆ ಗಳಿಸಿತ್ತು. ಪಿಲಿರಂಗ್ ಮತ್ತು ಪಿಲಿಗೊಬ್ಬು ಈ ಎರಡೂ ಸ್ಪರ್ಧೆಯಲ್ಲಿ ಅಕ್ಷಯ್ ತಂಡ ಪ್ರಶಸ್ತಿ ಪಡೆದಿತ್ತು. ಇದೀಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ಮನೀಶ್ ಹಾಗೂ ಚೇತು ಎಂಬವರು ಪೊಲೀಸರಿಗೆ ಶರಣಾಗಿದ್ದಾರೆ. ಇನ್ನೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.