ಇತ್ತೀಚಿನ ಸುದ್ದಿ
ಕನ್ನಡ ನಾಡು-ನುಡಿಗಾಗಿ ಸೇವೆ ಸಲ್ಲಿಸಿ: ಕರ್ನಾಟಕ ರಾಜ್ಯೋತ್ಸವದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕರೆ
02/11/2023, 23:04
ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ
info.reporterkarnataka@gmail.com
ಕನ್ನಡ ಭಾಷೆ, ಸಂಸ್ಕೃತಿ ಪರಂಪರೆಗೆ ತನ್ನದೇ ಆದ ಇತಿಹಾಸವಿದೆ. ನಮ್ಮ ನಾಡಿನ ಹಲವು ಹೋರಾಟಗಾರರು, ನಾಯಕರು, ಹಿರಿಯರ ಹೋರಾಟ, ಶ್ರಮದ ಫಲವಾಗಿ ಪ್ರತ್ಯೇಕ ಕರ್ನಾಟಕ ರಾಜ್ಯ ನಿರ್ಮಾಣವಾಗಿದೆ. ಆದ್ದರಿಂದ ಕನ್ನಡ ನಾಡು-ನುಡಿ, ಸಂಸ್ಕೃತಿ, ನೆಲ-ಜಲದ ಬಗ್ಗೆ ಪ್ರತಿಯೊಬ್ಬರಲ್ಲೂ ಅಭಿಮಾನ, ಹೆಮ್ಮೆ ಇರಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ತಾಲೂಕಾಡಳಿತದಿಂದ ಪಟ್ಟಣದ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಇಂದು ಜರುಗಿದ 68ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೀವನೋಪಾಯಕ್ಕಾಗಿ, ಉದ್ಯೋಗಕ್ಕಾಗಿ ಇಂಗ್ಲಿಷ್ ಸೇರಿದಂತೆ ಬೇರೆ ಭಾಷೆಗಳನ್ನು ಕಲಿತು ಮಾತನಾಡಬಹುದು. ಆದರೆ, ಕನ್ನಡ ಭಾಷೆಯ ಬಗ್ಗೆ ವಿಶೇಷ ಅಭಿಮಾನ ಹೊಂದಿರಬೇಕು. ಕನ್ನಡಾಭಿಮಾನ ಕೇವಲ ಮಾತಿನಲ್ಲಿ ಮಾತ್ರ ವ್ಯಕ್ತವಾಗಬಾರದು. ಕನ್ನಡಿಗರು ಸ್ಪಷ್ಟವಾಗಿ ಕನ್ನಡ ಮಾತನಾಡುವುದರೊಂದಿಗೆ ಬೇರೆ ಭಾಷಿಕರಿಗೂ ಕನ್ನಡವನ್ನು ಕಲಿಸಬೇಕು. ಕನ್ನಡ ಭಾಷೆಗಿರುವ ಶಕ್ತಿ, ತಾಕತ್ತು ಬೇರೆ ಭಾಷೆಯಲ್ಲಿ ಕಾಣಲು ಸಾಧ್ಯವಾಗದು. ಆದ್ದರಿಂದ ಕನ್ನಡವನ್ನು ಉಳಿಸಿ, ಕನ್ನಡವನ್ನು ಬೆಳೆಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ ಟಿಎಚ್‌ಒ ಬಸಗೌಡ ಕಾಗೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಯಲ್ಲಿನ ಸೇವೆಗಾಗಿ ಸಿಡಿಪಿಒ ಅಶೋಕ*ಕಾಂಬಳೆ ಅವರನ್ನು , ಉತ್ತಮ ಶಿಕ್ಷಕಿ ಅರ್ಚನಾ ಅಥಣಿ ಹಾಗೂ ಹಲವು ಕ್ಷೇತ್ರದಲ್ಲಿನ ಸೇವೆ, ಸಾಧನೆಯನ್ನು ಗುರುತಿಸಿ ಪತ್ರಕರ್ತರು, ವಿವಿಧ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಹಸೀಲ್ದಾರ್ ವಾಣಿ ಯು., ಅಥಣಿ ತಾ.ಪಂ. ಆಡಳಿತಾಧಿಕಾರಿಗಳಾದ ಬಸವರಾಜ ಹೆಗ್ಗನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಬಿ. ಮುರೋಟಗಿ, ತಾ.ಪಂ. ಇ.ಒ. ಶಿವಾನಂದ ಕಲ್ಲಾಪುರ, ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಅಥಣಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳಾದ ಶ್ರೀ ವೆಂಕಟೇಶ ಕುಲಕರ್ಣಿ, ಪಿಡಬ್ಲುಡಿ ಎಇಇಗಳಾದ ವೀರಣ್ಣಾ ವಾಲಿ, ಜಯಕುಮಾರ ಹಿರೇಮಠ, ಶ್ರೀಕಾಂತ ಮಾಕಾಣಿ ಸೇರಿದಂತೆ* ತಾಲೂಕುಮಟ್ಟದ ಅಧಿಕಾರಿಗಳು,ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಚಿದಾನಂದ ಲಕ್ಷ್ಮಣ ಸವದಿ ಸೇರಿದಂತೆ ವಿವಿಧ ಗಣ್ಯಮಾನ್ಯರು, ಸಾಹಿತಿಗಳು, ಪುರಸಭೆ ಸದಸ್ಯರು, ವಿವಿಧ ಚುನಾಯಿತ ಪ್ರತಿನಿಧಿಗಳು, ಶಿಕ್ಷಕರು, ಕನ್ನಡಾಭಿಮಾನಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮೆರವಣಿಗೆ ಸಂಭ್ರಮ:
ಕಾರ್ಯಕ್ರಮಕ್ಕೂ ಪೂರ್ವ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಕನ್ನಡ ನಾಡು, ನುಡಿ, ಸಂಸ್ಕೃತಿ, ಖ್ಯಾತ ಸಾಹಿತಿಗಳ ಭಾವಚಿತ್ರಗಳು, ಕರ್ನಾಟಕದ ವಿಶೇಷತೆ, ಶರಣರು-ಸಂತರು, ಕನ್ನಡಕ್ಕಾಗಿ ಶ್ರಮಿಸಿದ ಮಹನೀಯರು, ಕರ್ನಾಟಕದ ಇತಿಹಾಸ, ಪರಂಪರೆ ಶ್ರೀಮಂತಿಕೆ ಸಾರುವ ಸ್ತಬ್ಧ ಚಿತ್ರಗಳ ರೂಪಕಗಳ ಅದ್ಧೂರಿ ಮೆರವಣಿಗೆಯು ವಿವಿಧ ವಾದ್ಯ ಮೇಳಗಳೊಂದಿಗೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಂಭ್ರಮದಿಂದ ಜರುಗಿತು. ಮೆರವಣಿಗೆಯಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಜರುಗಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು.