ಇತ್ತೀಚಿನ ಸುದ್ದಿ
ಚಿಕ್ಕಬಳ್ಳಾಪುರ: ಭೀಕರ ರಸ್ತೆ ಅಪಘಾತಕ್ಕೆ ಮಗು ಸಹಿತ 13 ಮಂದಿ ದಾರುಣ ಸಾವು: ರಸ್ತೆ ಬದಿ ನಿಂತಿದ್ದ ಲಾರಿಗೆ ಟಾಟಾ ಸುಮೋ ವಾಹನ ಡಿಕ್ಕಿ
27/10/2023, 11:40

ಚಿಕ್ಕಬಳ್ಳಾಪುರ(reporterkarnataka.com): ಇಲ್ಲಿನ ಚಿತ್ರಾವತಿ ಸಮೀಪದ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಗು ಸಹಿತ 13 ಮಂದಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ರಸ್ತೆ ಬದಿ ನಿಂತಿದ್ದ ಸಿಮೆಂಟ್ ಲಾರಿಗೆ ಹಿಂಬದಿಯಿಂದ ಟಾಟಾ ಸುಮೋ ವಾಹನ ಡಿಕ್ಕಿ ಹೊಡೆದ ಪರಿಣಾಮ, ಟಾಟಾ ಸುಮೋದಲ್ಲಿದ್ದ 13 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ 8 ಮಂದಿ ಪುರುಷರು, ನಾಲ್ವರು ಮಹಿಳೆಯರು ಹಾಗೂ ಒಂದು ಗಂಡು ಮಗು ಸೇರಿದೆ. ಮೃತರನ್ನು ದೊಡ್ಡಬಳ್ಳಾಪುರದ ಅರುಣ (40), ಅವರ ಮಗ ಹೃತ್ವಿಕ್ ಯತಿನ್ (6), ಬೆಂಗಳೂರಿನ ಬಸವೇಶ್ವರ ನಗರದ ಸುಬ್ಬಮ್ಮ, ಆಂಧ್ರಪ್ರದೇಶದ ಕೊತ್ತಚೆರಮ ನಿವಾಸಿ ಪರುಮಾಳ್, ಕಾವಲ್ ಭೈರಸಂದ್ರದ ನರಸಿಂಹಮೂರ್ತಿ, ಚಾಲಕ ನರಸಿಂಹಪ್ಪ ಎಂದು ಗುರುತಿಸಲಾಗಿದೆ. ಉಳಿದವರ ಮಾಹಿತಿ ಇನ್ನು ಲಭ್ಯವಾಗಬೇಕಿದೆ.
ಮೃತಪಟ್ಟವರಲ್ಲಿ ಹೆಚ್ಚಿನವರು ಕೂಲಿಕಾರ್ಮಿಕರಾಗಿದ್ದಾರೆ. ಇವರೆಲ್ಲ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳುತ್ತಿದ್ದರು. ಆಂಧ್ರದ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಾಟಾ ಸುಮೋದಲ್ಲಿ ಬಾಗೇಪಲ್ಲಿ – ಚಿಕ್ಕಬಳ್ಳಾಪುರ ನಡುವಿನ ವಿವಿಧ ಪ್ರದೇಶಗಳಲ್ಲಿ ವಾಹನವೇರಿದ್ದರು ಎಂದು ಹೇಳಲಾಗಿದೆ.
ಅವಘಡದಲ್ಲಿ 12 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ದಟ್ಟ ಮಂಜು ಕವಿದಿದ್ದರಿಂದ ಟಾಟಾ ಸುಮೋ ವಾಹನ ಚಾಲಕನಿಗೆ ರಸ್ತೆ ಬದಿ ನಿಂತಿದ್ದ ಲಾರಿ ಕಾಣದೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗಿದೆ.
ಚಿಕ್ಕಬಳ್ಳಾಪುರದ ಚಿತ್ರಾವತಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ ಎರಡು ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.