12:14 AM Sunday12 - October 2025
ಬ್ರೇಕಿಂಗ್ ನ್ಯೂಸ್
ಹಾಸನಾಂಬ ದರ್ಶನಕ್ಕೆ ಜನರಿಗೆ ತಮ್ಮ ಗುರುತಿನ ಚೀಟಿ ನೀಡಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;…

ಇತ್ತೀಚಿನ ಸುದ್ದಿ

ವಿಘ್ನಗಳನ್ನು ಧೈರ್ಯದಿಂದ ಎದುರಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ: ರಾಘವೇಶ್ವರ ಶ್ರೀ

23/10/2023, 16:14

ಬಂಟ್ವಾಳ (reporterkarnataka.com): ಪೆಟ್ಟುಗಳು ನಮ್ಮನ್ನು ಗಟ್ಟಿಗೊಳಿಸುತ್ತವೆ. ವಿಘ್ನಗಳು ಬದುಕಿನ ಅವಿಭಾಜ್ಯ ಅಂಗ. ಇದನ್ನು ಧೈರ್ಯದಿಂದ ಎದುರಿಸಿದವನು ಬದುಕಿನಲ್ಲಿ ಯಶಸ್ವಿಯಾಗುತ್ತಾನೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಹೇಳಿದರು.
ಮಾಣಿ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನವರಾತ್ರ ನಮಸ್ಯಾ ಅಂಗವಾಗಿ ‘ಶ್ರೀ ಲಲಿತೋಪಾಖ್ಯಾನ’ ಪ್ರವಚನ ಮಾಲಿಕೆಯ ಎಂಟನೇ ದಿನದ ಪ್ರವಚನವನ್ನು ಶ್ರೀಗಳು ಅನುಗ್ರಹಿಸಿದರು.
ವಿಘ್ನಕ್ಕೆ ಭಯಪಟ್ಟು ಕಾರ್ಯದಿಂದ ವಿಮುಖನಾಗುವವನು ಬದುಕಿನಲ್ಲಿ ಸೋಲುತ್ತಾನೆ. ವಿಘ್ನಗಳು ಬಂದರೂ ತಮ್ಮ ಕಾರ್ಯಸಾಧನೆ ಮಾಡುವವರು ಉತ್ತಮರು; ಇದಕ್ಕೆ ಹೆದರಿ ಪಲಾಯನ ಮಾಡುವವರು ಸೋಲುತ್ತಾರೆ. ಒಂದು ಶ್ರೇಯಸ್ಸು ಪ್ರಾಪ್ತವಾಗಲು ಅರ್ಹತೆಯ ಪರೀಕ್ಷೆ ಆಗುತ್ತದೆ. ವಿಘ್ನಗಳು ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದು ವಿಶ್ಲೇಷಿಸಿದರು.
ಬಂಡಾಸುರ ತನ್ನ ದೈತ್ಯ ಸೇನೆಯೊಂದಿಗೆ ದೇವತೆಗಳು ತಪಸ್ಸು ಮಾಡುವ ಜಾಗಕ್ಕೆ ಬರುತ್ತಾನೆ. ದೇವಿ ದರ್ಶನದ ಬದಲು ಅಸುರ ದರ್ಶನವಾದಾಗ ತಪಸ್ಸು ಬಿಟ್ಟು ದೇವತೆಗಳು ಓಡಿಹೋದರು. ಆಪತ್ತಿನಿಂದ ಆಗುವ ಅನಾಹುತಕ್ಕಿಂತ ಆಪತ್ತಿನ ಭೀತಿಯಿಂದ ಆಗುವ ಅನಾಹುತ ಹೆಚ್ಚು, ದೇವತೆಗಳ ರಕ್ಷಣೆಗೆ ಲಲಿತೆ ಭದ್ರಕೋಟೆ ಒದಗಿಸುತ್ತಾಳೆ. ಅದನ್ನು ಬಂಡಾಸುರ ಧ್ವಂಸಗೊಳಿಸಿದಂತೆಲ್ಲ ಹೊಸ ಕೋಟೆ ನಿರ್ಮಾಣವಾಗುವುದರಿಂದ ಹತಾಶಗೊಂಡ ಬಂಡಾಸುರ ಶೋಣಿತನಗರಿಗೆ ವಾಪಸ್ಸಾದ. ದೇವರು ತಮ್ಮನ್ನು ರಕ್ಷಣೆ ಮಾಡುತ್ತಿದ್ದರೂ ಅದರ ಅರಿವು ದೇವತೆಗಳಿಗೆ ಇರಲಿಲ್ಲ ಎಂದು ಬಣ್ಣಿಸಿದರು.
ನಂಬಿದ ತಾಯಿ ನಮ್ಮನ್ನು ಕಾಪಾಡುತ್ತಾಳೆ ಎಂಬ ನಂಬಿಕೆ, ಶ್ರದ್ಧೆ ಬೇಕು. ಅದರಂತೆ ದೇವೇಂದ್ರ ಮಾತ್ರ ವ್ರತದಿಂದ ಮೇಲೇಳಲಿಲ್ಲ. ಬದಲಾಗಿ ಎದ್ದು ಓಡುತ್ತಿರುವವರಿಗೆ ಸಂದೇಶವನ್ನು ನೀಡುತ್ತಾನೆ. ಯುದ್ಧದಿಂದ ಅಸುರರನ್ನು ಗೆಲ್ಲಲು ಸಾಧ್ಯವಿಲ್ಲ. ಆದರೆ ಉಪಾಸನೆಯಿಂದ ಗೆಲ್ಲಬಹುದು ಎಂದು ಪ್ರೇರಣೆ ನೀಡುತ್ತಾನೆ. ಇಡೀ ತಂಡಕ್ಕೆ ಪ್ರೇರಣೆ ನೀಡುವುದು ನಾಯಕತ್ವದ ಗುಣ ಎಂದು ಹೇಳಿದರು.
ಯೋಜನದ ಅಗ್ನಿಕುಂಡವನ್ನು ರಚಿಸಿ, ಮಹಾಮಾಂಸವನ್ನೇ ಹೋಮದ್ರವ್ಯವಾಗಿ ನೀಡಿ ಶ್ರೀಚಕ್ರ ಹವನ ಮಾಡೋಣ. ಬಂಡಾಸುರನಿಂದ ಸಾಯುವ ಬದಲು ನಮ್ಮನ್ನು ಯಜ್ಞಕುಂಡಕ್ಕೆ ಸಮರ್ಪಿಸಿಕೊಳ್ಳೋಣ. ಬ್ರಹ್ಮಭಾವ ಹೊಂದಿ ಮುಕ್ತಿ ಪಡೆಯೋಣ ಎಂದು ಹುರಿದುಂಬಿಸುತ್ತಾನೆ. ಸಮರ್ಪಣೆಯಲ್ಲಿ ಎರಡು ವಿಧ. ನಮ್ಮದನ್ನು ಸಮರ್ಪಿಸುವುದು ಒಂದಾದರೆ ನಮ್ಮನ್ನೇ ಸಮರ್ಪಿಸಿಕೊಳ್ಳುವುದು ಇನ್ನೊಂದು. ಇದ ಆತ್ಮ ನಿವೇದನೆ. ಆತ್ಮನಿವೇದನೆ ಎನ್ನುವುದು ಒಂಬತ್ತು ಬಗೆಯ ಭಕ್ತಿಗಳಲ್ಲಿ ಸರ್ವಶ್ರೇಷ್ಠ ಎನಿಸಿದ ಪರಾಕಾಷ್ಠೆ ಎಂದು ವಿವರಿಸಿದರು.
ದೇವತೆಗಳ ದೇಹಭಾಗಗಳು ಇನ್ನು ಆಹುತಿ ನೀಡಲು ಇಲ್ಲ ಎಂಬ ಪರಿಸ್ಥಿತಿ ಬಂದಾಗ ಕೋಟಿಸೂರ್ಯನ ಪ್ರಭೆ ಯಜ್ಞಕುಂಡದ ಮಧ್ಯದಿಂದ ಆವೀರ್ಭವಿಸಿತು. ಕೋಟಿಚಂದ್ರರ ತಂಪು ಇತ್ತು. ಆಕಾರವಿಲ್ಲದ ಬೆಳಕಿನ ಮಧ್ಯದಲ್ಲಿ ಚಕ್ರಾಕಾರದಲ್ಲಿ ಲಲಿತೋದ್ಭವವಾಯಿತು. ಚಕ್ರಮಧ್ಯದಲ್ಲಿ ಪರಾಶಕ್ತಿಯ ಉದಯವಾಯಿತು. ಅರುಣ ವರ್ಣದ, ದಾಳಿಂಬೆ ಬಣ್ಣದ ಸೀರೆಯಿಂದ ಅಲಂಕೃತವಾಗಿ ಸರ್ವಾಭರಣ ಭೂಷಿತೆಯಾದ ಅಂಬೆಗೆ ಬ್ರಹ್ಮ, ವಿಷ್ಣು, ಶಿವಶಕ್ತಿಗಳು ಆಕೆಯಲ್ಲಿದ್ದವು ಎಂದರು. ಚತುರ್ಭುಜಳಾದ ದೇವಿ ಶಂಖ, ಚಕ್ರದ ಜತೆಗೆ ಕಬ್ಬಿನ ಬಿಲ್ಲು, ಪಂಚ ಬಾಣಗಳಿಂದ ಕಂಗೊಳಿಸುತ್ತಿದ್ದಳು. ಆಗ ಮನಸ್ಸು ಮತ್ತು ದೇಹದ ಗಾಯಗಳು ಮಾಗಿದವು. ದೇವತೆಗಳು ಮತ್ತಷ್ಟು ದೃಢರಾಗಿ, ವಜ್ರಕಾಯರಾದರು. ದೇವರಿಗೆ ನಾವು ಭಕ್ತಿಯಿಂದ ಸಮರ್ಪಣೆ ಮಾಡಿದರೆ, ದೇವರು ನೂರು ಪಟ್ಟು ಫಲ ನೀಡುತ್ತಾನೆ ಎಂದು ವಿವರಿಸಿದರು.


ದೇವತೆಗಳು ಬಗೆಬಗೆಯಾಗಿ ದೇವಿಯನ್ನು ಸ್ತುತಿಸುತ್ತಾರೆ. ಆಗ ಇಂದ್ರನ ಕಡೆಗೆ ನೋಟ ಬೀರಿ ವರ ಕೇಳುವಂತೆ ಆಜ್ಞಾಪಿಸಿದಳು ಎಂದು ಕಥಾಭಾಗವನ್ನು ಮುಕ್ತಾಯಗೊಳಿಸಿದರು.
ವಿಶ್ವೇಶ್ವರ ಭಟ್ ಉಂಡೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘ ಪರಿವಾರದ ನೇತಾರ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಬಿಜೆಪಿ ಮುಖಂಡ ಸತೀಶ್ ಕುಂಪಲ, ಮಾಣಿ ಮಠ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ಪ್ರಾಂತ ಕಾರ್ಯದರ್ಶಿ ವೇಣುಗೋಪಾಲ್ ಕೆದ್ಲ, ಮಂಗಳೂರು ಮಂಡಲ ಅಧ್ಯಕ್ಷ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ್ ಕುದುಪುಲ, ವಿದ್ಯಾಸಾರಥಿ ಯುಎಸ್‍ಜಿ ಭಟ್, ಕೆ.ಟಿ.ಶೈಲಜಾ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು