ಇತ್ತೀಚಿನ ಸುದ್ದಿ
ಬಂಟ್ವಾಳ: ನಟಿ ರಾಧಿಕಾ ಕುಮಾರಸ್ವಾಮಿ ಎಸ್ಟೇಟ್ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ನಾಪತ್ತೆ
19/10/2023, 22:50
ಬಂಟ್ವಾಳ(reporterkarnataka.com): ತಾಲೂಕಿನ ಅಮ್ಟೂರು ಗ್ರಾಮದ ರಾಯಪ್ಪನಕೋಡಿ ಬಳಿಯ ಸ್ಯಾಂಡಲ್ವುಡ್ ನಟಿ ರಾಧಿಕಾ ಕುಮಾರಸ್ವಾಮಿ
ಅವರ ಎಸ್ಟೇಟ್‌ನಲ್ಲಿ ಕೆಲಸಕ್ಕಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ.
ಕಳೆದ ಒಂದು ವಾರದಿಂದ ಕಾಣೆಯಾಗಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಾದನಗಿರಿ ನಿವಾಸಿ ಮಹಾದೇವ ಮಾರಿಪಟಗಾರ್ ಅವರ ಪತ್ನಿ ನಾಗರತ್ನ (33) ಅವರು, ನಟಿ ರಾಧಿಕಾ ಅವರಿಗೆ ಸೇರಿದ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿ ಅಮ್ಟೂರು ಗ್ರಾಮದ ರಾಯಪ್ಪನಕೋಡಿ ಎಂಬಲ್ಲಿರುವ ಎಸ್ಟೇಟ್‌ನಲ್ಲಿ 6 ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ನಾಗರತ್ನ ಅವರ ಪತಿ ಮಹಾದೇವ ಮಾರಿಪಟಗಾರ್ ಅವರ ಕೂಡ ಜೊತೆಯಲ್ಲಿಯೇ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅಕ್ಟೋಬರ್ 13ರಂದು ನಾಗರತ್ನ ಎಸ್ಟೇಟ್ನಿಂದ ಕಾಣೆಯಾಗಿದ್ದಾರೆ.
ಬೆಳಗ್ಗೆ 10.30ರ ವೇಳೆಗೆ ಎಸ್ಟೇಟ್ ನಲ್ಲಿರುವ ಮನೆಗೆ ಚಾ ಕುಡಿಯಲು ಹೋಗಿ ಬರುತ್ತೇನೆ ಎಂದು ಹೋದವಳು ಮತ್ತೆ ಕೆಲಸದ ಕಡೆ ಬಂದಿಲ್ಲ. ಇನ್ನು ಮನೆಯಿಂದ ನಾಪತ್ತೆಯಾಗಿದ್ದ ನಾಗರತ್ನ ಮರು ದಿನ ಅಂದರೆ ಅಕ್ಟೋಬರ್ 14 ರಂದು ಪತಿ ಮಹದೇವಗೆ ಕರೆ ಮಾಡಿ, ನನ್ನನ್ನು ಹುಡುಕುವ ಪ್ರಯತ್ನ ಬೇಡ. ನಾನು ದೂರ ಹೋಗುತ್ತಿದ್ದೇನೆ ಎಂದು ಹೇಳಿ ಫೋನ್ ಕಟ್ಟಿ ಮಾಡಿದ್ದಾರೆ. ಬಳಿಕ ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ.
ನಾಗರತ್ನ ಮನೆಯಿಂದ ಬಟ್ಟೆ, ಆಧಾರ್ ಕಾರ್ಡ್, ಚಿನ್ನ, ನಗದನ್ನು ತೆಗೆದುಕೊಂಡು ಹೋಗಿದ್ದರು. ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.