ಇತ್ತೀಚಿನ ಸುದ್ದಿ
ಅರಣ್ಯಾಧಿಕಾರಿಗೆ ಅವಾಚ್ಯ ಪದದಿಂದ ನಿಂದನೆ; ಕರ್ತವ್ಯಕ್ಕೆ ಅಡ್ಡಿ ಆರೋಪ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಎಫ್ ಐಆರ್
18/10/2023, 18:03

ಬೆಳ್ತಂಗಡಿ(reporterkarnataka.com): ಅರಣ್ಯ ಇಲಾಖೆಯ ಅಧಿಕಾರಿಗೆ ಸಾರ್ವಜನಿಕವಾಗಿ ಅವಾಚ್ಯ ಪದಗಳಿಂದ ನಿಂದಿಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ ಆರೋಪದ ಮೇಲೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಕಳೆಂಜದ ಮೀಸಲು ಅರಣ್ಯ ಪ್ರದೇಶದ ಜಾಗವನ್ನು ಒತ್ತುವರಿ ಮಾಡಿ ನಿರ್ಮಿಸಿದ ಮನೆಯೊಂದನ್ನು ತೆರವುಗೊಳಿಸುವ ಕಾರ್ಯಕ್ಕೆ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದರು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಅವರು ಸಾರ್ವಜನಿಕವಾಗಿ ಅರಣ್ಯಾಧಿಕಾರಿ ಜಯಪ್ರಕಾಶ್ ಅವರನ್ನು
ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅರಣ್ಯಾಧಿಕಾರಿ ಜಯಪ್ರಕಾಶ್ ಗೆ ‘ಲೋಫರ್ ನನ್ ಮಗ’ ಅಂತಾ ಬೈದಿದ್ದರು.
ಇಷ್ಟೇ ಅಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಆರೋಪಿಸಿ ಪುತ್ತೂರು ತಾಲೂಕು ರಾಜ್ಯ ಸರಕಾರಿ ನೌಕರರ ಸಂಘ ಖಂಡನೆ ವ್ಯಕ್ತಪಡಿಸಿತ್ತು. ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರಿಗೆ ಈ ಕುರಿತು ದೂರು ನೀಡಲಾಗಿತ್ತು. ಸಾರ್ವಜನಿಕವಾಗಿ ಅರಣ್ಯ ಸಿಬಂದಿ ಮೇಲೆ ಸುಳ್ಳು ಆರೋಪ ಹೊರಿಸಿ ಮಾನ ಹಾನಿ ಮಾಡಿದ್ದಾರೆ ಎಂದು ಆರೋಪಿಸಿರುವ ಸಂಘವು ಶಾಸಕ ಹರೀಶ್ ಪೂಂಜ ಹಾಗೂ ಮತ್ತಿತರರ ವಿರುದ್ಧ ಐಪಿಸಿ 1860(U/S-143, 353, 504, 149) ಅಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿತ್ತು.