ಇತ್ತೀಚಿನ ಸುದ್ದಿ
ಎನ್ ಡಿಎ ಮೈತ್ರಿಕೂಟ ಜೆಡಿಎಸ್ ಸೇರೊಲ್ಲ: ದೇವೇಗೌಡರಿಗೆ ಶಾಕಿಂಗ್ ಮೆಸೇಜ್ ಕೊಟ್ಟ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ
16/10/2023, 18:16

ಬೆಂಗಳೂರು(reporterkarnataka.com): ಜಾತ್ಯತೀತ ಜನತಾ ದಳ ಎನ್ ಡಿಎ ಜತೆ ಯಾವುದೇ ಮೈತ್ರಿ ಮಾಡದಿರಲು ನಿರ್ಧರಿಸಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಮಾಧ್ಯಮ ಜತೆ ಮಾತನಾಡಿದ ಅವರು, ನಮ್ಮ ನಿರ್ಧಾರವನ್ನು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಅವರಿಗೆ ತಿಳಿಸಲಾಗುವುದು ಎಂದರು.
ನಿಮ್ಮ ನಿರ್ಧಾರವನ್ನು ದೇವೇಗೌಡರು ಒಪ್ಪದಿದ್ದರೆ ಪಕ್ಷ ಬಿಟ್ಟು ಹೋಗುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ನಮ್ಮ ಮನೆ. ನಮ್ಮ ಮನೆಗೆ ಬೇರೆಯವರು ಬಂದರೆ ನಾವ್ಯಾಕೆ ಮನೆ ಬಿಟ್ಟು ಹೋಗಬೇಕು. ಪಕ್ಷದ ಎಲ್ಲ ಜಿಲ್ಲಾಧ್ಯಕ್ಷರು ಎನ್ ಡಿಎ ಜತೆ ಹೋಗದಿರಲು ಸಲಹೆ ಮಾಡಿದ್ದಾರೆ. ಈ ನಿರ್ಧಾರವನ್ನು ಪಕ್ಷದ ವರಿಷ್ಠರಿಗೆ ತಿಳಿಸಲಾಗುವುದು ಎಂದು ಇಬ್ರಾಹಿಂ ನುಡಿದರು.
ದೇವೇಗೌಡ, ಕುಮಾರಸ್ವಾಮಿ ಅವರು ಎನ್ ಡಿಎ ಜತೆ ಹೋದರೆ ನಿಮ್ಮ ಅಧ್ಯಕ್ಷ ಅಧಿಕಾರವನ್ನು ಉಪಯೋಗಿಸಿ ಅವರನ್ನು ಪಕ್ಷದಿಂದ ಉಚ್ಚಾಟಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸಿ.ಎಂ. ಇಬ್ರಾಹಿಂ, ಅಧ್ಯಕ್ಷೀಯ ಅಧಿಕಾರ ಬಳಸಿಕೊಂಡೇ ಪಕ್ಷದ ಸಭೆ ಕರೆದು ಈ ನಿರ್ಧಾರಕ್ಕೆ ಬಂದಿದ್ದೇವೆ. ಉಚ್ಚಾಟನೆಯ ಬಗ್ಗೆ ಈಗ ಏನೂ ಹೇಳಲಾರೆ. ಕೋರ್ ಕಮಿಟಿ ರಚಿಸಿ ಪಕ್ಷದ ನಿರ್ಧಾರವನ್ನು ವರಿಷ್ಠರಿಗೆ ಮುಟ್ಟಿಸಲಾಗುವುದು ಎಂದರು.