ಇತ್ತೀಚಿನ ಸುದ್ದಿ
ಕೆರೆ, ಕಾಲುವೆ, ಗುಂಡುತೋಪು ಒತ್ತುವರಿ: ಹೈಕೋರ್ಟ್ ಆದೇಶದಂತೆ ತೆರವಿಗೆ ಆಗ್ರಹಿಸಿ ಪ್ರತಿಭಟನೆ
29/07/2021, 11:04
ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ಹೈಕೋರ್ಟ್ ಆದೇಶದಂತೆ ತಾಲ್ಲೂಕಿನಾದ್ಯಂತ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ, ಗುಂಡುತೋಪು, ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಿ ಸಾಗುವಳಿ ಚೀಟಿ ಅಕ್ರಮವನ್ನು ಸೂಕ್ತ ಅಧಿಕಾರಿಗಳಿಂದ ತನಿಖೆ ನಡೆಸಬೇಕೆಂದು ಸಾಮೂಹಿಕ ನಾಯಕತ್ವ ರೈತ ಸಂಘದಿಂದ ತಹಸೀಲ್ದಾರ್ ಕಚೇರಿ ಮುಂದೆ ಹೋರಾಟ ಮಾಡಿ ತಹಸೀಲ್ದಾರ್ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಸಾಮೂಹಿಕ ನಾಯಕತ್ವ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಸರ್ಕಾರಿ ಗುಂಡುತೋಪು, ಸ.ನಂ. 149/2 ರ ಪೆಟ್ರೋಲ್ ಬಂಕ್ ಮಾಲೀಕರು ನ್ಯಾಯಾಲಯದಿಂದ ತಂದಿರುವ ತಡೆಯಾಜ್ಞೆ ತೆರವುಗೊಳಿಸಲು ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆಂದು ಆರೋಪ ಮಾಡಿದರು.
ಕೆರೆಗಳ ತವರು ಎಂದು ಪ್ರಸಿದ್ದಿ ಪಡೆದಿರುವ ಜಿಲ್ಲೆಯ ಕೆರೆಗಳನ್ನು ಉಳಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಪೂರ್ವಜರು ಬೆವರು ಸುರಿಸಿ ಕಟ್ಟಿ ಬೆಳೆಸಿದ ಕೆರೆಗಳು ದಿನೇ ದಿನೇ ರಿಯಲ್ ಎಸ್ಟೇಟ್ ಉದ್ದಿಮೆಗಳ ಪಾಲಾಗಿ ಜಲ ಮೂಲಗಳು ಸಂಪೂರ್ಣವಾಗಿ ನಶಿಸಿ ಹೋಗುತ್ತಿರುವ ಜೊತೆಗೆ ಇತ್ತೀಚೆಗೆ ಸುರಿಯುತ್ತಿರುವ ಮಳೆಗೆ ಸಮಪರ್ಕವಾದ ಕೆರೆ, ರಾಜಕಾಲುವೆಗಳ ಅಭಿವೃದ್ಧಿ ಪಡಿಸದೇ ಇರುವ ಕಾರಣ ರೈತರ ಹೊಲಗಳು ಮತ್ತು ನಗರದ ಮನೆಗಳಿಗೆ ನೀರು, ನುಗ್ಗಿ ಅವಾಂತರ ಸೃಷ್ಟಿ ಮಾಡುತ್ತಿವೆ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದೇ ಹೋದರೆ ಮುಂದಿನ ದಿನಗಳಲ್ಲಿ ಬಾರಿ ಅನಾಹುತ ಸಂಭವಿಸುವ ಕಾಲ ದೂರವಿಲ್ಲ ಎಂದು ಭವಿಷ್ಯ ನುಡಿದರು.
ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳನಿ ಗೌಡ ಮಾತನಾಡಿ, ತಾಲ್ಲೂಕಿನಾದ್ಯಂತ ಭೂರಹಿತ ಬಡವರಿಗೆ ಸರ್ಕಾರದಿಂದ ಜಮೀನು ಮಂಜೂರು ಮಾಡಲು ನಮೂನೆ 50, 53, 57, 59 ಅರ್ಜಿ ಸಲ್ಲಿಸಿ, ಜಾಥಕ ಪಕ್ಷಿಗಳಂತೆ ದರಕಾಸ್ತು ಕಮಿಟಿ ಮೂಲಕ ಮಂಜೂರಾಗಬೇಕಾದ ಜಮೀನು ಲಕ್ಷಾಂತರ ರೂಪಾಯಿ ಲಂಚ ಪಡೆದು ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿ ಮಾಡಿ ಬಲಾಡ್ಯರಿಗೆ ಸಾಗುವಳಿ ಚೀಟಿ ನೀಡಿರುವವರ ವಿರುದ್ಧ ತನಿಖೆ ಮಾಡುವಂತೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಒಳಗೊಂಡಂತೆ ರಚನೆ ಮಾಡಿದ ತನಿಖೆ ತಂಡ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಕೂಡಲೇ ತಹಸೀಲ್ದಾರ್ ವಿಜಯಣ್ಣನವರ ಅವಧಿಯಲ್ಲಿ ನಡೆದಿರುವ ಅಕ್ರಮ ಸಾಗುವಳಿ ಚೀಟಿ ರದ್ದು ಮಾಡಿ, ನ್ಯಾಯಯುತವಾಗಿ ಬಡವರಿಗೆ ಜಮೀನು ಮಂಜೂರು ಮಾಡಬೇಕೆಂದು ತಹಸೀಲ್ದಾರ್ ರವರನ್ನು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಮಾತನಾಡಿ ತಾಲ್ಲೂಕು ಕಛೇರಿ ಬಡವರ ಪಾಲಿಗೆ ಮುಳ್ಳಿನ ಹಾದಿಯಾಗಿ ದಲ್ಲಾಳಿಗಳಿಗೆ ರತ್ನ ಕಂಬಳಿ ಚಾಚುವ ಇಲಾಖೆಯಾಗಿದೆ. ಜನನ ಪ್ರಮಾಣ ಪತ್ರದಿಂದ ಮರಣ ಪ್ರಮಾಣ ಪತ್ರದವರೆಗೂ ಲಂಚ ವಿಲ್ಲದೆ ಯಾವುದೇ ಕೆಲಸ ಜನ ಸಾಮಾನ್ಯರಿಗೆ ಆಗುತ್ತಿಲ್ಲವೆಂದು ಅಸಮದಾನ ವ್ಯಕ್ತಪಡಿಸಿದರು.
ಕೂಡಲೇ ಮಾನ್ಯ ದಂಡಾಧಿಕಾರಿಗಳು ಕಛೇರಿಯಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿ ಬಡವರ ಕೆಲಸ ಯಾವುದೇ ಲಂಚವಿಲ್ಲದೆ ಮಾಡಿಕೊಡಲು ಸೂಚನೆ ಮಾಡಬೇಕು. ಹಾಗೂ ಮಂಜೂರಾಗಿ ಪಿ ನಂಬರ್‍ನಲ್ಲಿರುವ ರೈತರಿಗೆ ಪಿ ನಂಬರ್ ಮುಕ್ತಿ ಮಾಡಲು ಪಂಚಾಯಿತಿಗೊಂದು ಕಂದಾಯ ಅದಾಲತ್ ನಡೆಸುವ ಮುಖಾಂತರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಮಾನ್ಯರಲ್ಲಿ ಮನವಿ ಮಾಡಿದರು.