ಇತ್ತೀಚಿನ ಸುದ್ದಿ
ಚೈತ್ರಾ ಟೀಮಿನ ಹಾಲಶ್ರೀ ವಿರುದ್ಧ ಮತ್ತೊಂದು ಟಿಕೆಟ್ ವಂಚನೆ ಆರೋಪ: ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿಗೆ ಟಿಕೆಟ್ ಗೆ ಸ್ವಾಮೀಜಿ 1 ಕೋಟಿ ಪಡೆದಿದ್ದರೇ?
23/09/2023, 14:49
ಗದಗ(reporterkarnataka.com): ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಬೈಂದೂರಿನ ಉದ್ಯಮಿಯೊಬ್ಬರನ್ನು ವಂಚಿಸಿದ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಅಭಿನವ ಹಾಲಶ್ರೀ ವಿರುದ್ಧ ಮತ್ತೊಂದು ಟಿಕೆಟ್ ವಂಚನೆ ಪ್ರಕರಣ ದಾಖಲಾಗಿದೆ.
ಗದಗ ಜಿಲ್ಲೆಯ ಶಿರಹಟ್ಟಿಯ ರಣತೂರು ಪಿಡಿಒ ಆಗಿದ್ದ ಸಂಜಯ್ ಚವಡಾಳ ಅವರು ಅಭಿನವ ಸ್ವಾಮೀಜಿ ವಿರುದ್ಧ ಈ ವಂಚನೆ ಆರೋಪ ಮಾಡಿದ್ದಾರೆ. ಈ ಕುರಿತು ಸೆಪ್ಟಂಬರ್ 19 ರಂದು ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಂಜಯ್ ಚವಡಾಳ ಅವರು ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ನಿಟ್ಟಿನಲ್ಲಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಚುನಾವಣೆಗೆ ಮುಂಚಿತವಾಗಿ 1 ಕೋಟಿ ರೂ. ಹಣವನ್ನು ಸ್ವಾಮೀಜಿ ಪಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತಾಲೂಕಿನ ಹೆಬ್ಬಾಳ ಗ್ರಾಮದವರಾದ ಸಂಜಯ್ ಚವಡಾಳ ಅವರು ’ಅರುಂಧತಿ ಫೌಂಡೇಷನ್’ ಹೆಸರಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದರು. ಅಭಿನವ ಹಾಲವೀರಪ್ಪ ಸ್ವಾಮೀಜಿ ತಾನು ಬಿಜೆಪಿ ವರಿಷ್ಠರೊಂದಿಗೆ ನಿಕಟ ಸಂಪರ್ಕದಲ್ಲಿರುವುದಾಗಿ ಹೇಳಿಕೊಂಡಿದ್ದರು. ಹಾಗಾಗಿ ಸಂಜಯ್ ಅವರು ಸ್ವಾಮೀಜಿಯನ್ನು ಪರಿಚಯ ಮಾಡಿಕೊಂಡಿದ್ದರು. ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವಂತೆ ಅವರಿಗೆ ಕೋರಿದ್ದರು. ಅದಕ್ಕಾಗಿ 50 ಲಕ್ಷ, 40 ಲಕ್ಷ ಮತ್ತು 10 ಲಕ್ಷದಂತೆ ವಿವಿಧ ಹಂತದಲ್ಲಿ 1 ಕೋಟಿ ಹಣವನ್ನು ಸ್ವಾಮೀಜಿಗೆ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಗದಗ ಎಸ್ಪಿ ನೇಮಗೌಡ ಅವರು, ”ಅಮಾನತುಗೊಂಡಿರುವ ಪಿಡಿಒ ಸಂಜಯ ಚವಡಾಳ ನೀಡಿದ ದೂರಿನ ಅನ್ವಯ ವಿಚಾರಣೆ ಆರಂಭಿಸಿದ್ದೇವೆ. ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೇಳಿದ್ದ ಸಂಜಯ್, ವಿವಿಧ ಹಂತದಲ್ಲಿ ಹಾಲಶ್ರೀಗೆ ನಗದು ರೂಪದಲ್ಲಿ ಹಣವನ್ನ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಈಗಾಗಲೇ ಸಂಜಯ್ ಚವಡಾಳಗೆ ನೋಟಿಸ್ ಸಹ ಕೊಟ್ಟಿದೇವೆ. ಸಮಂಜಸ ದಾಖಲೆಗಳನ್ನ ಪೊಲೀಸರಿಗೆ ಸಲ್ಲಿಸುವಂತೆ ನೋಟಿಸ್ ಕೊಟ್ಟಿದೇವೆ. ಇದುವರೆವಿಗೂ ಯಾವುದೇ ದಾಖಲೆಯನ್ನು ದೂರುದಾರರು ನಮಗೆ ಕೊಟ್ಟಿಲ್ಲ. ದಾಖಲೆಗಳನ್ನ ಕೊಟ್ಟ ಮೇಲೆ ಮುಂದಿನ ತನಿಖೆ ಆರಂಭಿಸುತ್ತೇವೆಎಂದು ತಿಳಿಸಿದ್ದಾರೆ.