10:33 PM Friday4 - July 2025
ಬ್ರೇಕಿಂಗ್ ನ್ಯೂಸ್
ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು?

ಇತ್ತೀಚಿನ ಸುದ್ದಿ

ಚಿಕ್ಕಮಗಳೂರು ಜಿಲ್ಲೆಯ ವಿವಿಧ ಚರ್ಚುಗಳಲ್ಲಿ ಮಾತೆ ಮರಿಯಮ್ಮ ಸ್ಮರಣೆ: ಸಾಮೂಹಿಕ ಹೊಸಕ್ಕಿ ಊಟ

08/09/2023, 17:41

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮನೆಯಲ್ಲಿ ನಾವು ಹಿರಿಯರನ್ನು ಗೌರವಿಸಿದರೆ ಕುಟುಂಬದಲ್ಲಿ ಐಕ್ಯತೆ ಕಾಣಲು ಸಾಧ್ಯವಾಗುತ್ತದೆ ಎಂದು ಉಡುಪಿ ಪೆರಂಪಳ್ಳಿ ಚರ್ಚಿನ ಧರ್ಮಗುರು ಫಾ.ಸುನಿಲ್ ಡೊಮಿನಿಕ್ ಲೋಬೊ ಹೇಳಿದರು. ಅವರು ಬಣಕಲ್ ಚರ್ಚಿನಲ್ಲಿ ಮಾತೆ ಮರಿಯಮ್ಮನವರ ಹಬ್ಬದ ಪೂಜೆ ನೆರವೇರಿಸಿ ಮಾತನಾಡಿದರು.


ಒಟ್ಟಿಗೆ ಪ್ರಾರ್ಥಿಸುವ ಕುಟುಂಬ ಐಕ್ಯತೆಯಿಂದ ಬದುಕುತ್ತದೆ. ಪರಸ್ಪರ ದ್ವೇಷ, ಮತ್ಸರ, ಅಸೂಯೆ ಜೀವನ ಪ್ರೀತಿಯ ಜೀವನವಾಗದು. ಪ್ರೀತಿ, ಅನ್ಯೋನ್ಯತೆ ಒಗ್ಗಟ್ಟಿನ ಸಂಕೇತವಾಗಿದೆ. ಹಾಗೆಯೆ ತಂದೆ ತಾಯಿಯನ್ನು ಪ್ರೀತಿಸಿದರೆ ಉತ್ತಮ ಸ್ವಾಸ್ಥ್ಯ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ. ಮಕ್ಕಳು ಮೊಬೈಲ್ ಗೀಳಿನಿಂದ ದೂರವಿದ್ದು ಕುಟುಂಬದಲ್ಲಿ ಅವಿನಾಭಾವ ಸಂಬಂಧ ಪರಸ್ಪರ ವಿಚಾರ ವಿನಿಮಯದಿಂದ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಹೂವು ಒಂದೆ ದಿನದಲ್ಲಿ ಪರಿಮಳ ಸೂಸಿ ಬಾಡುತ್ತದೆ. ಆದರೆ ಮಾನವರಾದ ನಾವು ಜೀವಿಸುವವರೆಗೂ ಇತರರಿಗೆ ಹೂವಿನಂತೆ ಪರಿಮಳಿಸಿ ಬಡವರಿಗೆ ನೆರವಾಗಬೇಕು. ಮಾತೆ ಮರಿಯಮ್ಮನವರ ನಿಷ್ಕಳಂಕ ಪ್ರೀತಿಯನ್ನು ಗೌರವಿಸುವ ನಾವು ಹೆಣ್ಣಿಗೂ ಅಷ್ಟೇ ಗೌರವ ನೀಡಬೇಕು. ಇಂದಿನ ಸ್ಥಿತಿಯಲ್ಲಿ ಹೆಣ್ಣಿಗೆ ಭದ್ರತೆಯ ಅವಶ್ಯಕತೆಯಿದೆ. ಮಾತೆ ಮರಿಯಮ್ಮನವರ ಆದರ್ಶ ಗುಣಗಳು ನಮಗೆ ಪ್ರೇರಣೆಯಾಗಬೇಕು ಎಂದರು. ಈ ಸಂದರ್ಭದಲ್ಲಿ ಬಣಕಲ್ ಧರ್ಮಗುರು ಫಾ.ಪ್ರೇಮ್ ಲಾರೆನ್ಸ್ ಡಿಸೋಜ ಅವರು ಹಬ್ಬಕ್ಕಾಗಿ ಸಹಾಯಾಸ್ತ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಹಾಯಕ ಗುರುಗಳಾದ ಫಾ.ಥಾಮಸ್ ಕಲಘಟಗಿ,ಫಾ.ಆನಂದ್ ಇದ್ದರು. ಬಣಕಲ್, ಬಾಳೂರು,ಜಾವಳಿ, ಕೊಟ್ಟಿಗೆಹಾರ, ಕುಂದೂರು ಮತ್ತಿತರ ಗ್ರಾಮಗಳ ಕ್ರೈಸ್ತರು ಒಂದೇ ಚರ್ಚಿನಲ್ಲಿ ಸಮಾವೇಶಗೊಂಡು ಹೊಸಕ್ಕಿ ಊಟವನ್ನು ನೆರೆದ ಕ್ರೈಸ್ತ ಭಕ್ತಾಧಿಗಳು ಸಾಮೂಹಿಕವಾಗಿ ಪಂಕ್ತಿಯಲ್ಲಿ ಕುಳಿತು ಸೇವಿಸುವ ಮೂಲಕ ಮಾತೆ ಮರಿಯಮ್ಮನವರ ಜಯಂತಿಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಿದರು. ಹಬ್ಬದ ಅಂಗವಾಗಿ ಕುಟುಂಬದವರಿಗೆ ಹೊಸಕ್ಕಿ ಭತ್ತದ ತೆನೆಯನ್ನು ವಿತರಿಸಲಾಯಿತು. ಹಬ್ಬದ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನೆರೆದವರಿಗೆ ಸಿಹಿ ಮತ್ತು ಕಬ್ಬನ್ನು ವಿತರಿಸಲಾಯಿತು. ಕೆಳಗೂರು ಚರ್ಚಿನಲ್ಲಿ ಹಿರೇಬೈಲ್ ಧರ್ಮಗುರು ಫಾ.ಡೇವಿಡ್ ಪ್ರಕಾಶ್ ಹಬ್ಬದ ಪೂಜೆ ಅರ್ಪಿಸಿ ಮಾತನಾಡಿ ‘ಕುಟುಂಬದಲ್ಲಿ ತಾಯಿಗೆ ಮಹತ್ತರ ಪಾತ್ರವನ್ನು ನೀಡುತ್ತೇವೆ. ಏಸುವಿನ ತಾಯಿ ನಮಗೆ ಆದರ್ಶ ಮಾತೆಯಾಗಿದ್ದಾರೆ. ಅವರ ಆದರ್ಶಗಳು ನಮಗೆ ಬದುಕಲು ಪ್ರೇರಣೆಯಾಗಬೇಕು ಎಂದರು. ಗುರುಗಳು ಹೊಸ ತೆನೆಯನ್ನು ಆಶೀರ್ವಚನ ಮಾಡುವ ಮೂಲಕ ಹೊಸಕ್ಕಿ ಭತ್ತದ ತೆನೆಯನ್ನು ಭಕ್ತರಿಗೆ ಹಂಚಲಾಯಿತು. ಕೂವೆ ಹೋಲಿ ಕ್ರಾಸ್ ಚರ್ಚಿನಲ್ಲಿ ಉಜಿರೆ ದಯಾಳ್ ಬಾಗ್ ಧರ್ಮಗುರು ಫಾ.ಚಾರ್ಲ್ಸ್ ಸಲ್ಡಾನ ಹಬ್ಬದ ಬಲಿಪೂಜೆಯನ್ನು ಅರ್ಪಿಸಿ ಮಾತನಾಡಿ, ಮಾತೆ ಮರಿಯಮ್ಮನವರರಿಗೆ ವಿವಿಧ ಹೂಗಳ ಮೂಲಕ ಪ್ರಾಮುಖ್ಯತೆಯನ್ನು ನೀಡುತ್ತೇವೆ. ವಿವಿಧ ಹೂಗಳು ವಿವಿಧ ಸಂದೇಶಗಳನ್ನು ನೀಡುತ್ತವೆ. ಬಿಳಿಯ ಹೂಗಳು ಶುಭ್ರತೆ ಮತ್ತು ಸ್ವಚ್ಚತೆಯನ್ನು ಸೂಚಿಸುತ್ತವೆ. ಕೆಂಪು ಹೂಗಳು ತ್ಯಾಗ ಮತ್ತು ಸೇವಾ ಮನೋಭಾವನೆಯನ್ನು ಸೂಚಿಸುತ್ತವೆ. ಮರಿಯಮ್ಮನವರ ಸರಳ ಜೀವನ ನಮಗೆಲ್ಲಾ ಮಾದರಿಯಾಗಿದೆ. ಈ ಹಬ್ಬ ಕುಟುಂಬದ ಹಬ್ಬವಾಗಿದೆ’ ಎಂದರು.ಪೂಜೆಯ ಮುನ್ನ ಕೂವೆ ಪಟ್ಟಣದಿಂದ ಚರ್ಚ್ ವರೆಗೂ ಭಾಲಿಕಾ ಮರಿಯ ಪ್ರತಿಮೆ ಜೊತೆಗೆ ಮೆರವಣಿಗೆ ನಡೆಸಲಾಯಿತು. ಕೂವೆ ಚರ್ಚಿನ ಧರ್ಮಗುರು ಫಾ.ಲ್ಯಾನ್ಸಿ ಪಿಂಟೊ ಇದ್ದರು. ಹಬ್ಬದ ಪರವಾಗಿ ವಿವಿಧ ಕಾರ್ಯಕ್ರಮಗಳು ನಡೆದವು. ನೆರೆದವರಿಗೆ ಸಿಹಿ, ಕಬ್ಬು, ಹೊಸಕ್ಕಿ ಭತ್ತದ ತೆನೆ ಹಂಚಲಾಯಿತು. ವಾಟೇಖಾನ್, ನಿಡುವಾಳೆ, ಚಂದುವಳ್ಳಿ ಸುತ್ತಮುತ್ತಲಿನ ಕ್ರೈಸ್ತ ಭಕ್ತಾಧಿಗಳು ಹಬ್ಬದ ಪೂಜೆಯಲ್ಲಿ ಜಮಾಯಿಸಿದ್ದರು. ಧರ್ಮಗುರುಗಳು ಭತ್ತದ ತೆನೆಯನ್ನು ಆಶೀರ್ವಚನ ನೀಡಿ ಭಕ್ತರಿಗೆ ಹಂಚಲಾಯಿತು.ಸಿಹಿ, ಕಬ್ಬು ನೀಡಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು