ಇತ್ತೀಚಿನ ಸುದ್ದಿ
ಬಹರೈನ್ ನಲ್ಲಿ ಭೀಕರ ರಸ್ತೆ ಅಪಘಾತ: ಓಣಂ ಆಚರಿಸಿ ವಾಪಸ್ ಬರುತ್ತಿದ್ದ 5 ಮಂದಿ ಭಾರತೀಯರ ಸಾವು
03/09/2023, 22:27

ಮನಾಮಾ(reporterkarnataka.com): ಬಹರೈನ್’ನಲ್ಲಿ ಭಾನುವಾರ ನಡೆದ ಭೀಕರ ರಸ್ತೆ ಅಪಘಾತ ದಲ್ಲಿ 5 ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ.
ಬಹರೈನ್ ರಾಜಧಾನಿ ಮನಾಮಾದ ಶೇಖ್ ಖಲೀಫಾ ಬಿನ್ ಸಲ್ಮಾನ್ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಟ್ರಕ್ ವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಕೇರಳದ ನಿವಾಸಿಗಳು ಹಾಗೂ ತೆಲಂಗಾಣದ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಸಾವನ್ನಪ್ಪಿದವರನ್ನು ವಿ.ಪಿ.ಮಹೇಶ್ (33), ಮಲಪ್ಪುರಂನ ನಿವಾಸಿ ಜಗತ್ ವಾಸುದೇವನ್ (26), ತ್ರಿಶೂರ್ ನ ಚಾಲಕುಡಿಯ ಜಾರ್ಜ್ (28), ಕಣ್ಣೂರಿನ ಅಖಿಲ್ ರಘು (28), ತೆಲಂಗಾಣದ ಸುಮನ್ ರಾಜಣ್ಣ (27) ಮೃತರು ಎಂದು ಗುರುತಿಸಲಾಗಿದೆ.
ಸಲ್ಮಾಬಾದ್ ನ ಗಲ್ಫ್ ಏರ್ ಕ್ಲಬ್ ನಲ್ಲಿ ಮುಹರಕ್ ಅಲ್ ಹಿಲಾಲ್ ಆಸ್ಪತ್ರೆ ಆಯೋಜಿಸಿದ್ದ ಓಣಂ ಆಚರಣೆಯಲ್ಲಿ ಪಾಲ್ಗೊಂಡ ನಂತರ ಐವರು ಕಾರಿನಲ್ಲಿ ವಾಪಸಾಗುತ್ತಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಐವರು ಆಸ್ಪತ್ರೆ ಯಲ್ಲಿ ಉದ್ಯೋಗದಲ್ಲಿದ್ದರು ಎಂದು ತಿಳಿದು ಬಂದಿದೆ.