ಇತ್ತೀಚಿನ ಸುದ್ದಿ
ಖಾಸಗಿ ಬಸ್ ಗಳಿಗೆ ಬಾಗಿಲು ಅಳವಡಿಕೆ ಆದೇಶ: ಹೈಡ್ರೋಲಿಕ್ ಡೋರ್ ಬಗ್ಗೆ ಹೆಚ್ಚಿನವರ ಒಲವು
31/08/2023, 16:36

ಅನುಷ್ ಪಂಡಿತ್ ಮಂಗಳೂರು
info.reporterkrarnataka@gmail.com
ಇದೀಗ ಮಂಗಳೂರಿನ ಖಾಸಗಿ ಬಸ್ ಗಳಲ್ಲಿ ಡೋರ್ ಅಳವಡಿಕೆ ಮತ್ತು ಕಂಡೆಕ್ಟರ್ ಗಳು ಫುಟ್ ಬೋರ್ಡ್ ನಲ್ಲಿ ನಿಲ್ಲಬಾರದೆನ್ನುವ ಆದೇಶದ ಬಗ್ಗೆ ಜಿಜ್ಞಾಸೆ ಆರಂಭವಾಗಿದೆ. ಮಂಗಳೂರು ಪೊಲೀಸ್ ಕಮಿಷನರ್ ಕುಲ್ ದೀಪ್ ಕುಮಾರ್ ಜೈನ್ ಈ ಆದೇಶವನ್ನು ಹೊರಡಿಸಿದ್ದಾರೆ.
ಎರಡು ದಿನಗಳ ಹಿಂದೆ ನಗರದಲ್ಲಿ ರಸ್ತೆ ಅವಘಡ ಸಂಭವಿಸಿತ್ತು. ಸಿಟಿ ಬಸ್ಸಿನ ಯುವ ಕಂಡೆಕ್ಟರ್ ವೊಬ್ಬರು ಬಸ್ಸಿನಿಂದ ಎಸೆಯಲ್ಪಟ್ಟು ಸಾವನ್ನಪ್ಪಿದ್ದರು. ಈ ಘಟನೆಯ ಬಳಿಕ ಪೊಲೀಸ್ ಇಲಾಖೆ ಮತ್ತಷ್ಟು ಅಲರ್ಟ್ ಆಗಿದೆ. ಪೊಲೀಸ್ ಕಮಿಷನರ್ ಖಾಸಗಿ ಬಸ್ ಗಳಿಗೆ ಡೋರ್ ಅಳವಡಿಸಲು ಆದೇಶ ನೀಡಿದ್ದಾರೆ.
ಖಾಸಗಿ ಬಸ್ ಗಳಿಗೆ ಡೋರ್ ಅಳವಡಿಕೆಯ ಕುರಿತು ಹೆಚ್ಚಿನ ಚಾಲಕ ಹಾಗೂ ನಿರ್ವಾಹಕರು ತಮ್ಮ ಸಮ್ಮತ ಸೂಚಿಸಿದ್ದಾರೆ. ಕಂಡೆಕ್ಟರ್ ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಇದು ಒಳ್ಳೆಯ ಕ್ರಮ ಎಂದು ಬೆಂಬಲ ಸೂಚಿಸಿದ್ದಾರೆ. ಆದರೆ ಕಂಡೆಕ್ಟರ್ ಬಾಗಿಲಿನಲ್ಲಿ ನಿಲ್ಲಬಾರದು ಎನ್ನುವ ಪೊಲೀಸ್ ಇಲಾಖೆಯ ಸೂಚನೆ ಕೆಲವು ಕಂಡೆಕ್ಟರ್ ಗಳಿಗೆ ಅಪಥ್ಯವೆನೆಸಿದೆ. ಡೋರ್ ನಲ್ಲಿ ನಿಲ್ಲದಿದ್ದರೆ ಪ್ರಯಾಣಕರನ್ನು ಕರೆಯುವುದು ಹೇಗೆ ಎಂಬ ಚಿಂತೆ ಅವರಲ್ಲಿ ಕಾಡಲಾರಂಭಿಸಿದೆ.
ಬಸ್ ಗಳಿಗೆ ಹೈಡ್ರೋಲಿಕ್ ಬಾಗಿಲು ಅಳವಡಿಸಲಿ. ಡೋರಿನ ನಿಯಂತ್ರಣ ಚಾಲಕನ ಕೈಯಲ್ಲೇ ಇರುತ್ತದೆ. ಬಸ್ ಸ್ವಲ್ಪ ಸ್ಲೋ ಆದರೂ ಜನರ ಇಳಿಯುವ ಪ್ರವೃತ್ತಿ, ಹಂಪ್ಸ್ ಬಂದಾಗ ಬಸ್ಸಿನಿಂದ ಜಂಪ್ ಮಾಡುವ ಚಾಳಿಗೆ ಇದರಿಂದ ಬ್ರೇಕ್ ಬೀಳುತ್ತದೆ ಎಂದು ಹೆಚ್ಚಿನ ಸಿಟಿ ಹಾಗೂ ಸರ್ವಿಸ್ ಬಸ್ ಗಳ ಚಾಲಕ ಹಾಗೂ ನಿರ್ವಾಹಕರು ಹೇಳುತ್ತಾರೆ. ಹೈಡ್ರೋಲಿಕ್ ಡೋರ್ ವ್ಯವಸ್ಥೆಯಲ್ಲಿ ಪ್ರಯಾಣಿಕರಿಗೆ ಎಲ್ಲೆಂದರಲ್ಲಿ ಡೋರ್ ತೆಗೆಯಲು ಅವಕಾಶ ಸಿಗುವುದಿಲ್ಲ. ಚಾಲಕ ಬಸ್ ನಿಲ್ಲಿಸಿದ ಬಳಿಕವೇ ಡೋರ್ ಓಪನ್ ಮಾಡುತ್ತಾರೆ. ಸ್ಟೇಟ್ ಬ್ಯಾಂಕ್ ನಿಂದ ಮಂಗಳಾದೇವಿಗೆ ತೆರಳುವ 27 ನಂಬರಿನ ಕೆಲವು ಸಿಟಿ ಬಸ್ ಗಳಲ್ಲಿ ಚಾಲಕ ನಿಯಂತ್ರಣ ಹೊಂದಿರುವ ಹೈಡ್ರಾಲಿಕ್ ಡೋರ್ ವ್ಯವಸ್ಥೆ ಇದೆ.
ಡೋರ್ ಅಳವಡಿಸುವುದರಿಂದ ಟೈಮ್ಮಿಂಗ್ ಹಾಗೂ ಕಲೆಕ್ಷನ್ ಗಳಲ್ಲಿ ಸ್ವಲ್ಪ ದಿನ ಏರುಪೇರಾದರೂ ಕೆಲವು ದಿನಗಳಲ್ಲಿ ಸಹಜ ಸ್ಥಿತಿಗೆ ಬರುತ್ತದೆ. ಮಿಲಾಗ್ರಿಸ್ ಸಿಗ್ನಲ್ ಹಾಕುವ ಮೊದಲಿಗೆ ಟೈಮಿಂಗ್ ಸಮಸ್ಯೆ ಆಗುತ್ತಿತ್ತು. ಆಮೇಲೆ ಅಡ್ಜಸ್ಟ್ ಅಯಿತು. ಯಾವುದೇ ಕಾನೂನು ಮೊದಲಿಗೆ ಕಷ್ಟ ಅನಿಸಿದರೂ ಆಮೇಲೆ ಯಥಾ ಸ್ಥಿತಿಗೆ ಬರುತ್ತದೆ ಎಂದು ಬಸ್ ಡ್ರೈವರ್ ಗಿರಿಧರ(ಹೆಸರು ಬದಲಾಯಿಸಲಾಗಿದೆ) ಅಭಿಪ್ರಾಯ ಪಡುತ್ತಾರೆ.