ಇತ್ತೀಚಿನ ಸುದ್ದಿ
ಅತ್ಯಾಚಾರ, ಕೊಲೆಗೀಡಾದ ಸೌಜನ್ಯ ಪರ ಮಹಾಧರಣಿಯಲ್ಲಿ ಭಾಗವಹಿಸಲು ಎಐಟಿಯುಸಿ ಕರೆ
26/08/2023, 11:03
ಮಂಗಳೂರು(reporterkarnataka.com): ದೇಶದ ಕಾನೂನು ವ್ಯವಸ್ಥೆಯ ಬಗ್ಗೆ ಅಪನಂಬಿಕೆಗೆ ಕಾರಣವಾದ ಧರ್ಮಸ್ಥಳದ ಸೌಜನ್ಯ ಪ್ರಕರಣವನ್ನು ಮರು ತನಿಖೆ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳು ಆಗಸ್ಟ್ 28 ರಂದು ನಡೆಸುವ ಮಹಾಧರಣಿಯಲ್ಲಿ ಎಐಟಿಯುಸಿಯ ಸದಸ್ಯರು ಹಾಗೂ ಕಾರ್ಮಿಕ ವರ್ಗ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಐಟಿಯುಸಿ (ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್) ದ.ಕ ಮತ್ತು ಉಡುಪಿ ಜಿಲ್ಲಾ ಸಮಿತಿ ಕರೆ ನೀಡಿದೆ.
ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚುವ ಬದಲು ನಿರಪರಾಧಿ ಸಂತೋಷ್ ರಾವ್‍ನನ್ನು ಫಿಕ್ಸ್ ಮಾಡಿ ಆತನ ಬದುಕುವ ಹಕ್ಕನ್ನು ಕಸಿಯಲಾಗಿದೆ. ಸೌಜನ್ಯ ಪ್ರಕರಣದಲ್ಲಿ ಪ್ರಾರಂಭಿಕ ಹಂತದಲ್ಲಿ ಸಂಗ್ರಹಿಸಬೇಕಾದ ಸಾಕ್ಷಾಧಾರಗಳನ್ನು ಕಾನೂನುಬದ್ದವಾಗಿ ಸಂಗ್ರಹಿಸದೆ, ಸುಸಮಯದಲ್ಲಿ ಸಾಕ್ಷ್ಯ ಮಾದರಿಗಳನ್ನು ಪರಿಶೋಧಿಸದೆ ಈ ಪ್ರಕರಣ ಮುಚ್ಚಿಹೋಗಲು ಕುಕೃತ್ಯವೆಸಗಿದ ಅಧಿಕಾರಿಗಳನ್ನು ಹಾಗೂ ಅವರ ಕುಕೃತ್ಯಕ್ಕೆ ಒತ್ತಡ ಹೇರಿದ ಕಾಣದ ಕುಳಗಳನ್ನು ಸೂಕ್ತ ತನಿಖೆಗೆ ಒಳಪಡಿಸಿದರೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗಲು ಸಾಧ್ಯ. ಈ ಮಹಾಧರಣಿಯಲ್ಲಿ ನಾವೆಲ್ಲರೂ ಭಾಗವಹಿಸಿ ಸೌಜನ್ಯ ಪ್ರಕರಣ ಸೇರಿದಂತೆ ಈ ಹಿಂದೆ ನಡೆದ ಪದ್ಮಲತಾ, ಆನೆ ಮಾವುತರ ಕೊಲೆ ಪ್ರಕರಣಗಳನ್ನು ಸರಕಾರ ಮರುತನಿಖೆ ಮಾಡಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಆ ಮೂಲಕ ಸ್ವಾಸ್ಥ್ಯ ಮತ್ತು ನಿರ್ಬೀತಿ ಸಮಾಜ ನಿರ್ಮಿಸಲು ಮಹಾಜನತೆ ಬದ್ಧರಾಗಬೇಕೆಂದು ಎಐಟಿಯುಸಿ ದ.ಕ ಮತ್ತು ಉಡುಪಿ ಜಿಲ್ಲಾ ಸಮಿತಿಯ ಪರವಾಗಿ ಅಧ್ಯಕ್ಷರಾದ ಹೆಚ್.ವಿ ರಾವ್ ಹಾಗೂ ಪ್ರಧಾನ ಕಾರ್ಯದರ್ಶಿ ವಿ.ಎಸ್.ಬೇರಿಂಜ ಕಾರ್ಮಿಕರಿಗೆ ಕರೆ ನೀಡಿದ್ದಾರೆ.