ಇತ್ತೀಚಿನ ಸುದ್ದಿ
ಸ್ಪಂದನಾ ಪಂಚಭೂತಗಳಲ್ಲಿ ಲೀನ: ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ; ಕಣ್ಣೀರ ವಿದಾಯ
09/08/2023, 17:12
ಮೃದುಲಾ ನಾಯರ್ ಬೆಂಗಳೂರು
info.reporterkarnataka@gmail.com
ಥಾಯ್ಲೆಂಡ್‌ನಲ್ಲಿಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಪಾರ್ಥೀವ ಶರೀರದ ಅಂತ್ಯಕ್ರಿಯೆ ಬುಧವಾರ ಹರಿಶ್ಚಂದ್ರ ಘಾಟ್ ನಲ್ಲಿ ಸಕಲ ವಿಧಿ ವಿಧಾನಗಳೊಂದಿಗೆ ನಡೆಯಿತು.
ಮಲ್ಲೇಶ್ವರಂ ನಲ್ಲಿರುವ ಸ್ಪಂದನಾ ಅವರ ತವರು ಮನೆಯಿಂದ ಪಾರ್ಥಿವ ಶರೀರವನ್ನು ಆ್ಯಂಬ್ಯುಲೆನ್ಸ್ ನಲ್ಲಿ ಇರಿಸಲಾಯಿತು. ಪತಿ ವಿಜಯ ರಾಘವೇಂದ್ರ ಹಾಗೂ ಸಂಬಂಧಿಕರು ಮನೆಯಿಂದ ಅಂತಿಮ ಗೌರವ ಸಲ್ಲಿಸಿದರು. ನಂತರ ವಾಹನಗಳ ಮೆರವಣಿಗೆ ಮೂಲಕ ಹರಿಶ್ಚಂದ್ರ ಘಾಟ್ ಗೆ ಪಾರ್ಥಿವ ಶರೀರವನ್ನು ತರಲಾಯಿತು. ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಪುತ್ರ ಶೌರ್ಯ ಹಾಗೂ ಸಂಬಂಧಿಕರು ಅಂತ್ಯಕ್ರಿಯೆ ನೆರವೇರಿಸಿದರು. ಸ್ಪಂದನಾ ಅವರ ಸಂಬಂಧಿಕರ ಹಾಗೂ ಅಭಿಮಾನಿಗಳ ಆಕ್ರಂಧನ ಮುಗಿಲು ಮುಟ್ಟಿತ್ತು.
ಸ್ಪಂದನಾ ಅವರು ಥಾಯ್ಲೆಂಡ್ ಪ್ರವಾಸದಲ್ಲಿರುವಾಗ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು. ಅವರ ಪಾರ್ಥಿವ ಶರೀರವನ್ನು ಮಂಗಳವಾರ ತಡರಾತ್ರಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತವರು ಮನೆಗೆ ತರಲಾಯಿತು.
ಸ್ಪಂದನಾ ತವರು ಮನೆಯಾದ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಮ್ ಅವರ ನಿವಾಸದಲ್ಲೇ ಸ್ಪಂದನಾ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಮಧು ಬಂಗಾರಪ್ಪ, ಮಾಜಿ ಸಚಿವರಾದ ಉಮಾಶ್ರೀ, ಕುಮಾರ್ ಬಂಗಾರಪ್ಪ, ಚಿತ್ರನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪ್ರಿಯಾಂಕಾ ಉಪೇಂದ್ರ, ದೊಡ್ಡಣ್ಣ, ರಂಗಾಯಾಣ ರಘು, ಸೇರಿದಂತೆ ರಾಜಕೀಯ ರಂಗದ ಗಣ್ಯರು, ಚಿತ್ರರಂಗದ ಗಣ್ಯರು ಹಾಗೂ ಸಾರ್ವಜನಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದರು.