ಇತ್ತೀಚಿನ ಸುದ್ದಿ
ಗೃಹಲಕ್ಷ್ಮೀ ಯೋಜನೆ ಅನುಷ್ಠಾನಕ್ಕೆ ಪಾಲಿಕೆಯಿಂದ ಡಾಟಾ ಎಂಟ್ರಿ ಲಕ್ಷ್ಮೀಯರಿಗೆ ಕಾಟ: ಮುಖ್ಯಮಂತ್ರಿಗಳೇ ಗಮನಿಸಿ
01/08/2023, 13:34

ಅನುಷ್ ಪಂಡಿತ್ ಮಂಗಳೂರು
ಶ್ರಾವ್ಯ ಶ್ರೀಧರ್ ಮಂಗಳೂರು
info.reporterkarnataka@gmail.ಕಂ
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಜಾರಿಗೆ ಸಂಬಂಧಿಸಿದಂತೆ ಮಂಗಳೂರು ಮಹಾನಗರಪಾಲಿಕೆಯಲ್ಲಿ ಭಾರೀ ಸರ್ಕಸ್ ಆರಂಭವಾಗಿದೆ. ನೋಂದಣಿ ಹೆಚ್ಚಿಸಿ ಸಾಧನೆ ತೋರಿಸಲು ಅತ್ತು ಕರೆದು ನೋಂದಾಯಿಸುವ ತಂತ್ರಕ್ಕೆ ಪಾಲಿಕೆ ಕಮಿಷನರ್ ಮುಂದಾಗಿದ್ದಾರೆ.
ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಪಾಲಿಕೆ ಕಮಿಷನರ್ ಮಹಿಳಾ ಡಾಟಾ ಎಂಟ್ರಿ ಆಪರೇಟರ್(ಪಾಲಿಕೆಯ ಲಕ್ಷ್ಮೀಯರು) ಗಳಿಗೆ ಕಾಟ ಕೊಡಲು ಶುರು ಮಾಡಿದ್ದಾರೆ. ಸರಕಾರದ ಯಾವುದೇ ಯೋಜನೆ ಬಂದರೂ ಹೊರಗುತ್ತಿಗೆ ಆಧಾರದಲ್ಲಿ ತಿಂಗಳಿಗೆ ಕೇವಲ 15 ಸಾವಿರ ರೂ. ಸಂಬಳಕ್ಕೆ ದುಡಿಯುವ ಡಾಟಾ ಎಂಟ್ರಿ ಆಪರೇಟರ್ ಗಳನ್ನು ದುಡಿಸಲಾಗುತ್ತದೆ. ಎಲೆಕ್ಷನ್ ಡ್ಯೂಟಿ, ಬೀದಿಬದಿ ವ್ಯಾಪಾರಿಗಳ ಸಾಲ ಯೋಜನೆ ಸೇರಿದಂತೆ ಸರಕಾರದ ಯಾವುದೇ ಸ್ಕೀಂ ಬಂದರೂ ಇವರು ರೆಡಿಯಾಗಲೇ ಬೇಕು. ಯಾಕೆಂದರೆ ಪಾಲಿಕೆಯ ಬಹುತೇಕ ಖಾಯಂ ಸಿಬ್ಬಂದಿಗಳು ಕಂಪ್ಯೂಟರ್ ನಲ್ಲಿ ಅನಕ್ಷರಸ್ಥರು. ಕೀ ಬೋರ್ಡ್ ನಲ್ಲಿ ಆ ಅಕ್ಷರ ಹುಡುಕುವುದೇ ಅವರಿಗೆ ಕಷ್ಟ. ಹಾಗೆ ಡಾಟಾ ಎಂಟ್ರಿಗಳಲ್ಲಿ ಡಬ್ಬಲ್ ಗ್ರಾಜುವೆಟ್ ಗಳು, ಪಿಜಿ ಆದವರೂ ಇದ್ದಾರೆ. ಹಾಗಾಗಿ ಇಡೀ ಪಾಲಿಕೆಯು ಇಲ್ಲಿರುವ ಒಟ್ಟು 34 ಮಂದಿ ಡಾಟಾ ಎಂಟ್ರಿ ಆಪರೇಟರ್ ಗಳು ಮತ್ತು ಪಾಲಿಕೆಯ ಬೇರೆ ಬೇರೆ ವಿಭಾಗದಲ್ಲಿರುವ ಹೊರಗುತ್ತಿಗೆ ಸಿಬ್ಬಂದಿಗಳಿಂದ ಕಾರ್ಯನಿರ್ವಹಿಸುತ್ತಿದೆ ಎನ್ನುವುದು ಸಾರ್ವಜನಿಕರು ಕೂಡ ಒಪ್ಪಿಕೊಳ್ಳುತ್ತಾರೆ.
ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಪಾಲಿಕೆ ಕಚೇರಿಯಲ್ಲಿ 8 ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ 8 ಮಂದಿ ಡಾಟಾ ಎಂಟ್ರಿಗಳನ್ನು ನೇಮಿಸಿ ಬೆಳಗ್ಗೆ 9ರಿಂದ ರಾತ್ರಿ 8ರ ತನಕ ದುಡಿಸಲಾಗಿದೆ. ಇದೀಗ ಆಗಸ್ಟ್ 1ರಿಂದ ಪಾಲಿಕೆ ಕಚೇರಿಯಲ್ಲಿ 2 ಕೇಂದ್ರಗಳನ್ನಿಟ್ಟು ಉಳಿದ 6 ಕೇಂದ್ರಗಳನ್ನು ನ್ಯಾಯಬೆಲೆ ಅಂಗಡಿಯಲ್ಲಿ ತೆರೆಯಲು ಪಾಲಿಕೆ ಕಮಿಷನರ್ ಆದೇಶ ಹೊರಡಿಸಿದ್ದಾರೆ. ರಾಜ್ಯದ ಯಾವುದೇ ಮಹಾನಗರಪಾಲಿಕೆಯಾಗಲಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿನಲ್ಲಾಗಲಿ ಇಂತಹ ನಿರ್ಧಾರವನ್ನು ಎಲ್ಲೂ ಕೈಗೊಂಡಿಲ್ಲ. ಇಷ್ಟೇ ಅಲ್ಲದೆ ದೇವಸ್ಥಾನದ ಮುಂಭಾಗದಲ್ಲಿ ಪೋಲಿಯೊ ಲಸಿಕೆ ಕೇಂದ್ರ ಮಾದರಿಯಲ್ಲಿ ಮಹಿಳಾ ಡಾಟಾ ಎಂಟ್ರಿ ಸಿಬ್ಬಂದಿಯನ್ನು ನೇಮಿಸಿ ದುಡಿಸುವ ದಾಷ್ಟ್ಯತನವನ್ನು ಪಾಲಿಕೆ ಕಮಿಷನರ್ ತೋರಿಸಿದ್ದಾರೆ.
ಸರಕಾರದ ಯೋಜನೆ ಜನರಿಗೆ ತಲುಪಬೇಕು ಸರಿ. ಆದರೆ ನೋಂದಾವಣೆ ಪ್ರಕ್ರಿಯೆಗೆ ಬೇಕಾಗುವ ಸೌಲಭ್ಯವನ್ನು ಪಾಲಿಕೆ ತನ್ನ ಸಿಬ್ಬಂದಿಗಳಿಗೆ ಒದಗಿಸಬೇಕಲ್ಲ? ನೋಂದಾವಣೆಗೆ ಕಂಪ್ಯೂಟರ್ ವ್ಯವಸ್ಥೆ ಮಾಡದೆ ಡಾಟಾ ಎಂಟ್ರಿ ಆಪರೇಟರ್ ಗಳು
ತಮ್ಮ ಪರ್ಸನಲ್ ಮೊಬೈಲ್ ನಲ್ಲಿ ನೋಂದಣಿ ಮಾಡಬೇಕು. ಇದಕ್ಕೆ ಬೇಕಾಗುವ ನೆಟ್ ಪ್ಯಾಕೇಜ್ ಡಾಟಾ ಎಂಟ್ರಿಗಳೇ ಒದಗಿಸಬೇಕು. ಇದನ್ನು ಡಾಟಾ ಎಂಟ್ರಿಗಳು ವಿರೋಧಿಸಿದ ಬಳಿಕ ವೈಫೈ ವ್ಯವಸ್ಥೆ ಒದಗಿಸಲಾಯಿತು. ಇದೀಗ ಕಮಿಷನರ್ ಅವರು ಹೊಸ ಆದೇಶ ಹೊರಡಿಸಿ 6 ಮಂದಿ ಡಾಟಾ ಎಂಟ್ರಿ ಸಿಬ್ಬಂದಿಗಳನ್ನು ರೇಶನ್ ಅಂಗಡಿಗಳಿಗೆ ನಿಯೋಜಿಸಿ ಆದೇಶ ಹೊರಡಿಸಿದ್ದಾರೆ. ಇಲ್ಲಿಯೂ ಕಂಪ್ಯೂಟರ್ ಇಲ್ಲ, ವೈಫೈ ಇಲ್ಲ. ಇನ್ನೊಂದು ವಿಷಯವೆಂದರೆ ಪಡಿತರ ಚೀಟಿಯ ಹಳೆಯ ಎಂಎನ್ ಜಿ ನಂಬರನ್ನು ಗೃಹಲಕ್ಷ್ಮೀ ಆ್ಯಪ್ ತೆಗೆದುಕೊಳ್ಳುವುದಿಲ್ಲ. ಹೊಸ ಸಂಖ್ಯೆ ಸಿಕ್ಕಿದ ಬಳಿಕ ಅದು ಅಪ್ ಡೇಡ್ ಆಗಲು 10 ದಿವಸಗಳು ಬೇಕು. ಅಷ್ಟೊತ್ತಿಗೆ ಯೋಜನೆಯ ಕಾಲಮಿತಿ ಕೊನೆಗೊಳ್ಳುತ್ತಾ ಬರುತ್ತದೆ. ಇದೆಲ್ಲ ಪಾಲಿಕೆಯ ಕಮಿಷನರ್ ಗೆ ಅರ್ಥವಾಗೋದಿಲ್ಲ.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬಿಪಿಎಲ್ ಕಾರ್ಡ್ ದಾರರ ಸಂಖ್ಯೆ ಬಹಳ ಕಡಿಮೆ. ಇನ್ನು ಎಪಿಎಲ್ ಕಾರ್ಡ್ ದಾರರಲ್ಲಿ ಹೆಚ್ಚಿನವರು ತೆರಿಗೆ ಅಥವಾ ಜಿಎಸ್ ಟಿ ಪಾವತಿದಾರರಾಗಿದ್ದಾರೆ. ಇವರೆಲ್ಲ ಈ ಯೋಜನೆಗೆ ಅರ್ಹರಾಗಿರುವುದಿಲ್ಲ ಇದನ್ನು ಅರಿತುಕೊಂಡರೆ ಎಲ್ಲವೂ ಸುಲಲಿತ.