ಇತ್ತೀಚಿನ ಸುದ್ದಿ
ಮಣಿಪುರ ಹಿಂಸಾಚಾರ: ಮಂಗಳೂರಿನಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪ್ರತಿಭಟನೆ
26/07/2023, 20:57

ಮಂಗಳೂರು(reporterkarnataka.com): ಕಳೆದ ಮೇ ತಿಂಗಳ ಮೂರರಂದು ಮಣಿಪುರದಲ್ಲಿ ಹಿಂಸೆ ಪ್ರಾರಂಭವಾದಾಗ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಅಬ್ಬರದ ಚುನಾವಣಾ ಪ್ರಚಾರದಲ್ಲಿ ತಲ್ಲಿನರಾಗಿದ್ದರು. ಆನಂತರ ವಿದೇಶ ಪ್ರವಾಸದಲ್ಲಿಯೇ ಖುಷಿ ಪಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇತಿಹಾಸ ಕ್ಷಮಿಸದು ಎಂದು ಅಖಿಲ ಭಾರತ ವಿಚಾರವಾದಿ ಸಂಘದ ರಾಷ್ಟ್ರ ಅಧ್ಯಕ್ಷರಾದ ಪ್ರೊ. ನರೇಂದ್ರ ನಾಯಕ್ ಹೇಳಿದರು.
ಮಣಿಪುರದಲ್ಲಿ ನಡೆಯುತ್ತಿರುವ ಆದಿವಾಸಿಗಳ ಮೇಲಿನ ಹಿಂಸಾಚಾರದ ಘಟನೆಗಳನ್ನು ಖಂಡಿಸಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯು ನಡೆಸಿದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಣಿಪುರದಲ್ಲಿ ಆದಿವಾಸಿ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿ ಪ್ಯಾಸಿಸಂನ ಜನಾಂಗೀಯ ಶುದ್ದೀಕರಣ ಸಿದ್ಧಾಂತದ ಭಾಗವಾಗಿದೆ. ಈಶಾನ್ಯ ಭಾರತದಲ್ಲಿ ಸಂಘ ಪರಿವಾರವೂ ನಿರಂತರವಾಗಿ ಹರಿಯ ಬಿಟ್ಟಿರುವ ಪ್ಯಾಸಿಸಂನ ಸಿದ್ಧಾಂತದ ಪ್ರಚಾರದ ಭಾಗವಾಗಿದೆ. ಜನಾಂಗೀಯ ಶುದ್ಧೀಕರಣ ಸಿದ್ಧಾಂತದ ಅಪಾಯಕಾರಿ ಬೆಳವಣಿಗೆಗಳು ಮಣಿಪುರದಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ನಿಷ್ಕ್ರಿಯವಾಗಿದೆ.
ಕಳೆದ ಮೇ 3ರ ನಂತರ ಪ್ರಾರಂಭವಾಗಿ ಈ ದಾಳಿ ಪೂರ್ವನಿಯೋಜಿತ ಮತ್ತು ವ್ಯವಸ್ಥಿತವಾದ ಕಾರ್ಯಯೋಜನೆಯ ಫಲವಾಗಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಡಾ. ಕೃಷ್ಣಪ್ಪ ಕೊಂಚಾಡಿ ಅವರು ಹೇಳಿದರು.
ಸಭೆಯನ್ನು ಉದ್ದೇಶಿಸಿ ಸಿಐಟಿಯುವಿನ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸುನಿಲ್ ಕುಮಾರ್ ಬಜಾಲ್,ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಮಾಂಜಲಿ ಘಟಕದ ಅಧ್ಯಕ್ಷರಾದ ಕರಿಯ ಕೆ, ಸಮುದಾಯ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ವಾಸುದೇವ ಉಚ್ಚಿಲ್ ರವರು ಮಾತನಾಡಿದರು.ಆದಿವಾಸಿ ಹಕ್ಕುಗಳ ಸಮಿತಿಯ ಮಾರ್ಗದರ್ಶಕರಾದ ಯೋಗೀಶ್ ಜೆಪ್ಪಿನಮೊಗರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರತಿಭಟನಾ ಸಭೆಯ ನಾಯಕತ್ವವನ್ನು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮುಖಂಡರುಗಳಾದ ಶೇಖರ್ ಕೆ., ಮಂಗಳ ಜ್ಯೋತಿ ರವೀಂದ್ರ ವಿನೋದ್, ಸೀನಾ ಕೋಡಿಕಲ್, ಪ್ರಶಾಂತ್ ಕಂಕನಾಡಿ ,ವಿಜ್ಞೇಶ್, ಮಂಗಳ ಜ್ಯೋತಿ ಮಹಿಳಾ ನಾಯಕರಾದ ರಶ್ಮಿ , ಮಂಗಳ ಜ್ಯೋತಿ ಮಂಜುಳಾ ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ, ಕಾರ್ಯದರ್ಶಿ ಕೃಷ್ಣ ತಣ್ಣೀರುಬಾವಿ, ಖಜಾಂಚಿ ರಘುವೀರ್ , ಬೌದ್ಧ ಮಹಾಸಭಾ ಜಿಲ್ಲೆಯ ಮುಖಂಡರಾದ ಪದ್ಮನಾಭ ಕೋಡಿಕಲ್ ಸುಂದರಲಾಲ್ ಮತ್ತು ಶಶಿಕಲ, DYFI ನ ಜಿಲ್ಲೆಯ ಅಧ್ಯಕ್ಷರಾದ ಬಿ.ಕೆ. ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್, ಜಗದೀಶ್ ಬಜಾಲ್ ಆದಿವಾಸಿ ಹಕ್ಕುಗಳ ಸಮಿತಿಯ ಕಾನೂನು ಸಲಹೆಗಾರರಾದ ಮನೋಜ್ ವಾಮಾಂಜೂರು ಉಪಸ್ಥಿತರಿದ್ದರು.