ಇತ್ತೀಚಿನ ಸುದ್ದಿ
ಸಿಎಂ ನಿವಾಸ ‘ಕಾವೇರಿ’ಯಲ್ಲಿ ಕಾವಿಗಳಿಗೆ ಕವರ್ ಹಂಚಿಕೆ: ಬಿಜೆಪಿ ಹೈಕಮಾಂಡ್ ಗರಂ ? ಹಾಗಾದರೆ ಕವರೊಳಗೆ ಏನಿತ್ತು?
23/07/2021, 12:36

ಬೆಂಗಳೂರು(reporterkarnataka news): ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಬಿಜೆಪಿ ಹೈಕಮಾಂಡ್ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸೂಚಿಸುತ್ತಿದ್ದಂತೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿತ್ತು. ಶಾಸಕರು, ಸಂಸದರು, ಆಪ್ತರು ದಿನವಿಡೀ ಸಿಎಂ ನಿವಾಸಕ್ಕೆ ಆಗಮಿಸುತ್ತಿದ್ದರು. ಜತೆಗೆ ಮಠಾಧಿಪತಿಗಳ ದಂಡೇ ಕಾವೇರಿಗೆ ಭೇಟಿ ನೀಡಿತ್ರು. ಈ ಸಂದರ್ಭದಲ್ಲಿ ಮಠಾಧಿಪತಿಗಳಿಗೆ ಸಿಎಂ ನಿವಾಸದಲ್ಲಿ ಕವರ್ ಹಂಚಲಾಗಿತ್ತು. ಇದೀಗ ಪಕ್ಷದ ವರಿಷ್ಠರು ಈ ಕುರಿತು ಗರಂ ಆಗಿದ್ದಾರೆ.
ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ಆಪ್ತ ಎನ್ನಲಾದ ಕೆಐಆರ್ ಡಿಸಿಎಲ್ ಅಧ್ಯಕ್ಷ ರುದ್ರೇಶ ಅವರು ಎಲ್ಲ ಸ್ವಾಮಿಗಳಿಗೆ ಕಾವೇರಿ ನಿವಾಸದಲ್ಲಿ ಒಂದು ಕವರ್ ಹಂಚಿದ್ದಾರೆ. ಕವರ್ ನಲ್ಲಿ ಏನಾದರೂ ಗುಪ್ತ ಸಂದೇಶ ಇತ್ತೇ? ನಗದು, ಚೆಕ್ ಇತ್ತೇ? ಬೇರೆ ಏನಿತ್ತು? ಎಂಬ ಮಾಹಿತಿ ಇದುವರೆಗೆ ಲಭಿಸಿಲ್ಲ.
ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಈ ನಡಾವಳಿಕೆಯಿಂದ ಬಿಜೆಪಿ ಹೈಕಮಾಂಡ್ ಕೆಂಡಾಮಂಡಲವಾಗಿದೆ. ಯಡಿಯೂರಪ್ಪ ಅವರು ಒತ್ತಡ ತಂತ್ರ ಹೇರಬಾರದು ಎಂದು ಎಚ್ಚರಿಕೆ ನೀಡಿದೆ ಎಂದು ತಿಳಿದು ಬಂದಿದೆ.
ಕಾವೇರಿಗೆ ಮೊದಲ ದಿನ ಒಟ್ಟಾಗಿ ಸುಮಾರು 35ಕ್ಕೂ ಹೆಚ್ಚು ವೀರಶೈವ ಲಿಂಗಾಯತ ಸ್ವಾಮೀಜಿಗಳು ಭೇಟಿ ನೀಡಿದ್ದರು. ಇವರೆಲ್ಲ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಸುವಂತೆ ಹೈಕಮಾಂಡ್ ಒತ್ತಾಯಿಸಿದ್ದರು. ಮಠಾಧಿಪತಿಗಳು ಕಾವೇರಿಗೆ ಭೇಟಿ ನೀಡುತ್ತಿದ್ದಂತೆ ಬಿಜೆಪಿಯೊಳಗೆ ಅಸಮಾಧಾನ ವ್ಯಕ್ತವಾಗಿತ್ತು.