ಇತ್ತೀಚಿನ ಸುದ್ದಿ
ವಿರೋಧ ಪಕ್ಷವನ್ನು ಹತ್ತಿಕ್ಕುವ ಕಾರ್ಯ ಕಾಂಗ್ರೆಸ್ ಆಡಳಿತ ಮಾಡುತ್ತಿದೆ: ಶಾಸಕ ವೇದವ್ಯಾಸ ಕಾಮತ್
20/07/2023, 15:23

ಬೆಂಗಳೂರು(reporterkarnataka.com): ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವು ಸರ್ವಾಧಿಕಾರಿ ಧೋರಣೆಯ ಮೂಲಕ ಸಂವಿಧಾನ ವಿರೋಧಿ ಕೆಲಸ ಮಾಡುತಿದ್ದು ಇವುಗಳನ್ನು ಮುಂದಿನ ದಿನಗಳಲ್ಲಿಯೂ ಗಟ್ಟಿ ಧ್ವನಿಯಲ್ಲಿ ವಿರೋಧಿಸುವುದಾಗಿ ಶಾಸಕ ಡಿ. ವೇದವ್ಯಾಸ
ಕಾಮತ್ ಹೇಳಿದ್ದಾರೆ.
ರಾಜಕೀಯ ಪಕ್ಷಗಳ ಮುಖಂಡರ ಸ್ವಾಗತ ಹಾಗೂ ಉಪಚಾರಕ್ಕಾಗಿ ಉನ್ನತ ಮಟ್ಟದ ಅಧಿಕಾರಿಗಳನ್ನು ಬಳಸಿಕೊಂಡಿರುವ ರಾಜ್ಯ ಸರಕಾರದ ನಡೆಯನ್ನು ವಿರೋಧಿಸುತ್ತೇವೆ. ರಾಜ್ಯ ಸರಕಾರ ಆಡಳಿತವನ್ನು ದುರುಪಯೋಗಪಡಿಸುತ್ತಿದ್ದು ಅದನ್ನು ಪ್ರಶ್ನಿಸುವ ಸಂದರ್ಭದಲ್ಲಿ ಉತ್ತರ ನೀಡುವುದು ಸರಕಾರದ ಕರ್ತವ್ಯ. ಆದರೆ ಪ್ರಶ್ನಿಸುವವರನ್ನೇ ಅಧಿವೇಶನದಿಂದ ಅಮಾನತು ಮಾಡುವ ಸರಕಾರದ ನಡೆ ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಹೇಳಿದರು.
ಗೌರವಾನ್ವಿತ ಸ್ಥಾನದಲ್ಲಿರುವ ಸ್ಪೀಕರ್ ಅವರು ಪಕ್ಷದ ವಕ್ತಾರರಂತೆ ವರ್ತಿಸುವ ಮೂಲಕ ವಿಧಾನಸಭೆಯ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಪ್ರತಿಭಟನೆಯನ್ನು ನೆಪವಾಗಿರಿಸಿ ವಿರೋಧ ಪಕ್ಷದ 10 ಸದಸ್ಯರನ್ನು ಅಮಾನತು ಮಾಡಲಾಗಿದೆ. ಈ ಹಿಂದೆ ವಿಧಾನಸಭೆಯಲ್ಲಿ ಗೊಂದಲವೆಬ್ಬಿಸಿ ದಾಂಧಲೆ ನಡೆಸಿದ್ದ ಘಟನೆಗಳನ್ನು ಆಡಳಿತ ಪಕ್ಷದ ನಾಯಕರು ನೆನಪಿಸಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷವನ್ನು ಹತ್ತಿಕ್ಕುವ ಕೆಲಸವನ್ನು ಮಾಡುತಿದ್ದು ಸರ್ವಾಧಿಕಾರಿಯಂತೆ ವರ್ತಿಸುವುದನ್ನು ವಿರೋಧಿಸುತ್ತೇವೆ. ರಾಜ್ಯ ಸರಕಾರದ ಈ ನೀತಿಯನ್ನು ಖಂಡಿಸಿ ಉಗ್ರ ಪ್ರತಿಭಟನೆ ನಡೆಸಲಾಗವುದು ಎಂದು ಶಾಸಕ ಕಾಮತ್ ಹೇಳಿದ್ದಾರೆ.