ಇತ್ತೀಚಿನ ಸುದ್ದಿ
ಜಲ್ಲಿಗುಡ್ಡೆ ಜಯನಗರದ ಹದಗೆಟ್ಟ ರಸ್ತೆ: ಕೂಡಲೇ ಕಾಂಕ್ರಿಟೀಕರಣಕ್ಕೆ ಒತ್ತಾಯಿಸಿ ಪಾಲಿಕೆ ಆಡಳಿತಕ್ಕೆ ಮನವಿ
23/06/2023, 19:13

ಮಂಗಳೂರು(reporterkarnataka.com):ನಗರ ಹೊರವಲಯದ ಮಹಾನಗರ ಪಾಲಿಕೆ ವ್ಯಾಪ್ತಿಯ ಬಜಾಲ್ ವಾರ್ಡಿನ ಜಲ್ಲಿಗುಡ್ಡೆಯಿಂದ ಜಯನಗರ ಪ್ರದೇಶಕ್ಕೆ ಸಂಪರ್ಕಿಸುವ ಮುಖ್ಯರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ತಕ್ಷಣ ರಸ್ತೆ ದುರಸ್ತಿ ಮಾಡುವಂತೆ ಪಾಲಿಕೆ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಸ್ಥಳೀಯ ನಿವಾಸಿಗಳ ಸುಗಮ ಸಂಚಾರಕ್ಕೆ ಬಹಳ ಅಡಚಣೆಯುಂಟಾಗಿದೆ. ರಸ್ತೆಯುದ್ದಕ್ಕೂ ಇರುವ ಗುಂಡಿಗಳಿಗೆ ಮಣ್ಣು ಮತ್ತು ಜಲ್ಲಿ ಮಿಶ್ರಣ ಮಾಡಿದ ಪರಿಣಾಮ ರಸ್ತೆಯಲ್ಲೆಲ್ಲ ಕೆಸರುಮಯವಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಉರುಳಿ ಬೀಳುವಂತಹ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದ್ದು ರಸ್ತೆಯಲ್ಲಿ ವಾಹನ ಸಂಚಾರ ಮಾಡಲು ಕೂಡಾ ಅಯೋಗ್ಯವಾಗಿದೆ.ಮಾತ್ರವಲ್ಲ ನಡೆದಾಡಲೂ ಆಗದಂತಹ ಪರಿಸ್ಥಿತಿಯಿಂದ ಸ್ಥಳೀಯ ನಾಗರಿಕರು ದಿನನಿತ್ಯ ಸಮಸ್ಯೆಯನ್ನು ಅನುಭವಿಸುವಂತಾಗಿದೆ. ಈ ಬಗ್ಗೆ ಊರ ನಾಗರೀಕರು ಹಲವಾರು ಬಾರಿ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಈ ರಸ್ತೆಯನ್ನು ದುರಸ್ತಿಗೊಳಿಸಲು ಸಾಧ್ಯವಾಗಿಲ್ಲ. ಈಗಾಗಲೇ ನಗರದಲ್ಲೆಲ್ಲ ಎಲ್ಲಾ ಮುಖ್ಯ ರಸ್ತೆ ಹಾಗೂ ಒಳರಸ್ತೆಗಳಿಗೆಲ್ಲ ಕಾಂಕ್ರಟೀಕರಣಗೊಳಿಸಲಾಗುತ್ತಿದ್ದೆ. ಆದರೆ ಬಜಾಲ್ ವಾರ್ಡಿನ ಮುಖ್ಯರಸ್ತೆಯಿಂದ ಹಿಡಿದು ಒಳರಸ್ತೆಗಳ ವರೆಗೂ ಯಾವುದೇ ರಸ್ತೆಗಳನ್ನು ಕಾಂಕ್ರಟೀಕರಣಗೊಳಿಸಲು ಸಾಧ್ಯವಾಗದೆ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
ಈ ಎಲ್ಲಾ ಹಿನ್ನಲೆಯಲ್ಲಿ ಪಾಲಿಕೆ ಆಡಳಿತ ಈ ಕೂಡಲೇ ಬಜಾಲ್ ವಾರ್ಡಿನ ಜಲ್ಲಿಗುಡ್ಡೆ ಜಯನಗರದ ಹದಗೆಟ್ಟ ರಸ್ತೆಯನ್ನು ಕೂಡಲೇ ಕಾಂಕ್ರಟೀಕರಣಗೊಳಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿಯನ್ನು ಸಲ್ಲಿಸಲಾಯಿತು.