ಇತ್ತೀಚಿನ ಸುದ್ದಿ
ತನಿಖೆಯ ಅಗತ್ಯವಿಲ್ಲ, ಆಡಿಯೋ ನಳಿನ್ ಅವರದ್ದೇ ಎನ್ನುವುದರಲ್ಲಿ ಎರಡು ಮಾತಿಲ್ಲ: ಹೀಗೆಂತ ಹೇಳಿದರೇ ಸಿಎಂ ಯಡಿಯೂರಪ್ಪ?
20/07/2021, 18:30
ಬೆಂಗಳೂರು(reporterkarnataka news): ತನಿಖೆ ನಡೆಸುವ ಅಗತ್ಯವೇ ಇಲ್ಲ, ಆ ಆಡಿಯೋ ನಳಿನ್ ಕುಮಾರ್ ಕಟೀಲ್ ಅವರದ್ದೇ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗಿದೆ.
ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸೋಮವಾರ ಸಂಜೆ ತನ್ನ ಆಪ್ತ ಸಚಿವರು ಹಾಗೂ ಮುಖಂಡರ ಜತೆ ಸಭೆ ನಡೆಸಿದ ಮುಖ್ಯಮಂತ್ರಿಯವರು ಈ ಸಂದರ್ಭದಲ್ಲಿ ಆಡಿಯೋ ಕುರಿತು ಮಾತನಾಡಿದ್ದಾರೆ ಎನ್ನಲಾಗಿದೆ.
ಆ ಆಡಿಯೋ ಆತನದ್ದೇ. ಅದರಲ್ಲಿ ಎರಡು ಮಾತಿಲ್ಲ. ತನಿಖೆ ನಡೆಸುವ ಅಗತ್ಯವೇ ಇಲ್ಲ ಎಂದು ಆಪ್ತರ ಜತೆಗಿನ ಸಭೆಯಲ್ಲಿ ಯಡಿಯೂರಪ್ಪ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಬಹಿರಂಗಗೊಂಡು ರಾಜ್ಯ ಬಿಜೆಪಿಯಲ್ಲಿ ಮತ್ತೊಮ್ಮೆ ಭಾರಿ ಸಂಚಲನ ಮೂಡಿಸಿತ್ತು. ನಳಿನ್ ಅವರು ತಮ್ಮ ಅಪ್ತರ ಜತೆ ತುಳು ಭಾಷೆಯಲ್ಲಿ ನಡೆಸಿದ ಸಂಭಾಷಣೆಯ ತುಣುಕು ವೈರಲ್ ಆಗಿತ್ತು.
ನಳಿನ್ ಅವರು ತುಳುವಿನಲ್ಲಿ ಸಂಭಾಷಣೆ ನಡೆಸುತ್ತಾ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪದಚ್ಯುತಿಯ ಸುಳಿವು ನೀಡಿದ್ದಾರಲ್ಲದೆ ಶೆಟ್ಟರ್, ಈಶ್ವರಪ್ಪ ಅವರನ್ನು ಕೈಬಿಡುವ ಬಗ್ಗೆ ಮಾಹಿತಿಯನ್ನು ತನ್ನ ಆಪ್ತನ ಜತೆ
ಹಂಚಿಕೊಂಡಿದ್ದಾರೆ.
ಯಾರಿಗೂ ಹೇಳಬೇಡ ಎಂದು ತುಳು ಭಾಷೆಯಲ್ಲಿ ಹೇಳುತ್ತಾ, ನಂತರ ನಾವು ಹೇಳಿದಂತೆಯೇ ನಡೆಯಲಿದೆ. ಯಾರೇ ಬಂದರೂ ನಮಗೆ ಬೇಕಾದವರೇ ಆಗಿರಲಿದ್ದು ಮೂರು ಜನರ ಹೆಸರು ಹೈಕಮಾಂಡ್ ಗಮನದಲ್ಲಿದೆ ಎಂದು ನಳಿನ್ ಮಾಹಿಯನ್ನು ತನ್ನ ಆಪ್ತರು ಜತೆ ಹೇಳಿಕೊಂಡಿದ್ದಾರೆ.
ಆದರೆ ಈ ಆಡಿಯೋ ಕುರಿತು ಸ್ಪಷ್ಟನೆ ನೀಡಿದ ನಳಿನ್ ಅವರು, ಅದು ತನ್ನದಲ್ಲ, ಕಿಡಿಗೇಡಿಗಳ ಕೆಲಸ. ಸತ್ಯಾಸತ್ಯತೆ ಹೊರಬರಲು ತನಿಖೆ ನಡೆಸಲಿ. ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆಯುವುದಾಗಿ ಹೇಳಿದ್ದರು.