ಇತ್ತೀಚಿನ ಸುದ್ದಿ
ನೇಣು ಬಿಗಿದು ಯುವಕ ಆತ್ಮಹತ್ಯೆ: ಸಾವಿಗೆ ಮುನ್ನ ಆತ ಡೆತ್ ನೋಟ್ ನಲ್ಲಿ ಬರೆದದ್ದು ಏನು? ಆತನಿಗೆ ಕಿರುಕುಳ ಕೊಟ್ಟವನು ಯಾರು?
21/06/2023, 21:21

ಉಳ್ಳಾಲ(reporterkarnataka.com): ತೊಕ್ಕೊಟ್ಟು ಸಮೀಪದ ಕಾಪಿಕಾಡು ಬಳಿಯ ಸತ್ಯನಾರಾಯಣ ಕಂಪೌಂಡ್ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ ನಡೆದಿದೆ.
ಸತ್ಯನಾರಾಯಣ ಕಂಪೌಂಡ್ ನಿವಾಸಿ ನಿತಿನ್ ಪೂಜಾರಿ(36) ಆತ್ಮಹತ್ಯೆ ಮಾಡಿಕೊಂಡ ಯುವಕ. ನಿತಿನ್ ಇಂದು ಮಧ್ಯಾಹ್ನ ತನ್ನ ಮನೆಯ ಕೋಣೆಯೊಳಗೆ ಹೋಗಿ ಬಾಗಿಲು ಮುಚ್ಚಿದ್ದ. ನೆರೆಯ ಮನೆಯಲ್ಲಿ ಬೀಡಿ ಕಟ್ಟುತ್ತಿದ್ದ ಆತನ ತಾಯಿ ಬಂದು ಕೋಣೆಯ ಬಾಗಿಲು ಬಡಿದಿದ್ದು ಬಾಗಿಲ ಎಡೆಯಿಂದ ನೋಡಿದಾಗ ಮಗ ಫ್ಯಾನಿಗೆ ನೇಣು ಬಿಗಿದಿರುವುದು ಕಂಡು ಬಂತು.
ನಿತಿನ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿದ್ದಾನೆ ಎಂದು ತಿಳಿದು ಬಂದಿದೆ. ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಪ್ರವೀಣ್ ಶೆಟ್ಟಿ ಚೆಂಬುಗುಡ್ಡೆ ಎಂಬಾತ ನೇರ ಕಾರಣ. ಇವರಿಂದ ಮಾನಸಿಕವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ. ಇವನಿಗೆ ಕಠಿಣ ಶಿಕ್ಷೆಯನ್ನು ನೀಡಬೇಕಾಗಿ ವಿನಂತಿ ಎಂದು ಬರೆದಿದ್ದಾನೆ ಎಂದು ತಿಳಿದು ಬಂದಿದೆ.
ಮೃತ ನಿತಿನ್ ಈ ಮೊದಲು ಮಾಂಡೋವಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಈಗ ಸಿಕ್ಕಿದ ಸಣ್ಣ ಪುಟ್ಟ ಕೆಲಸಕ್ಕೆ ತೆರಳುತ್ತಿದ್ದನಂತೆ. ನಿತಿನ್ ಅಕ್ಕ ಬಾವ, ಅಮ್ಮನನ್ನ ಅಗಲಿದ್ದಾರೆ. ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.