ಇತ್ತೀಚಿನ ಸುದ್ದಿ
ಕಾಂಗ್ರೆಸ್ ಜತೆ ಬಿಜೆಪಿ ಹೊಂದಾಣಿಕೆ ರಾಜಕಾರಣ ಮಾಡುತ್ತೇ?: ಸಂಸದ ಪ್ರತಾಪ್ ಸಿಂಹ ಸ್ವಪಕ್ಷೀಯ ನಾಯಕ ವಿರುದ್ದವೇ ಮಾಡಿದ ಆರೋಪ ಏನು?
13/06/2023, 22:07

ಬೆಂಗಳೂರು(reporterkarnataka.com): ಬಿಜೆಪಿ ಅಧಿಕಾರದಲ್ಲಿದ್ದಾಗ ಪಕ್ಷದ ಅತಿರಥ ಮಹಾರಥ ನಾಯಕರು ಮಾಡಿದ ಹೊಂದಾಣಿಕೆ ರಾಜಕಾರಣದಿಂದ ಪಕ್ಷಕ್ಕೆ ಈ ಸ್ಥಿತಿ ಬಂತು ಎಂದು ಸ್ವಪಕ್ಷೀಯ ನಾಯಕರ ವಿರುದ್ಧವೇ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಎಗರಾಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಈ ಮುನ್ನ ಹೊಂದಾಣಿಕೆ ರಾಜಕಾರಣದ ಬಗ್ಗೆ ಧ್ವನಿ ಎತ್ತಿದ್ದರು. ಇದೀಗ ಸಂಸದ ಪ್ರತಾಪ ಸಿಂಹ ಅವರು ಸಿ.ಟಿ. ರವಿ ಅಭಿಪ್ರಾಯಕ್ಕೆ ಧ್ವನಿಗೂಡಿಸಿದ್ದಾರೆ.
ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಹೊಂದಾಣಿಕೆ ರಾಜಕಾರಣ ನಡೆದಿತ್ತು. ಅರ್ಕಾವತಿ ಡಿ ನೋಟಿಪಿಕೇಶನ್ ಬಗ್ಗೆಯಾಗಲಿ, ರೀಡೂ ಕುರಿತಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಹಾವಿನ ಪೆಟ್ಟಿಗೆಯಲ್ಲಿ ಹಾವಿದೆ ಎಂದು ಹೇಳಿದ್ದೇ ಹೊರತು ಹಾವನ್ನು ಹೊರತೆಗೆಯುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡಿಲ್ಲ. ನನ್ನ ಬೆನ್ನು ನೀನು ಕೆರಿ, ನಿನ್ನ ಬೆನ್ನು ನಾನು ಕೆರಿತ್ತೀನಿ ಅಂತ ಬಿಜೆಪಿ ನಾಯಕರು ಕಾಂಗ್ರೆಸ್ ಜತೆ
ಹೊಂದಾಣಿಕೆ ಮಾಡಿಕೊಂಡಿದ್ದರು. ಇದೀಗ ಕಾಂಗ್ರೆಸ್ ಸರಕಾರದ ಪರಿಸ್ಥಿತಿಯೂ ಅದೇ ಆಗಿದೆ. ಚುನಾವಣೆಯ ಸಮಯದಲ್ಲಿ ಪಿಎಸ್ ಐ ಹಗರಣ, 40 ಪರ್ಸಂಟ್, ಬಿಟ್ ಕಾಯಿನ್ ಹಗರಣ ಎಂದೆಲ್ಲ ಹೇಳಿದರು. ಈಗ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳಾಗುತ್ತಾ ಬಂತು. ಯಾಕೆ ಇವರು ಈ ಹಗರಣಗಳ ಬಗ್ಗೆ ತನಿಖೆ ನಡೆಸುತ್ತಿಲ್ಲ? ಸಿದ್ದರಾಮಯ್ಯ ಅವರು ಕೂಡ ಹೊಂದಾಣಿಕೆ ರಾಜಕಾರಣದಲ್ಲಿ ಶಾಮೀಲಾಗಿದ್ದಾರೆಯೇ? ನಮ್ಮ ನಾಯಕರು ನಿಮ್ಮ ಜತೆ ಹೊಂದಾಣಿಕೆ ರಾಜಕಾರಣದಲ್ಲಿ ಶಾಮೀಲಾಗಬಹುದು. ಆದರೆ ನಮ್ಮ ಕಾರ್ಯಕರರು ನಿಮ್ಮ ಜತೆ ಶಾಮೀಲಾಗುವುದಿಲ್ಲ. ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಪ್ರತಾಪ್ ಸಿಂಹ ನುಡಿದರು.