ಇತ್ತೀಚಿನ ಸುದ್ದಿ
ಎಂಆರ್ ಪಿಎಲ್ ನಿಂದ 50 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: ಈ ಬಾರಿಯೂ ಸ್ಥಳೀಯರಿಗಿಲ್ಲ ಆದ್ಯತೆ: ಸಂಸದರೇ ನ್ಯಾಯ ಒದಗಿಸಿ
24/05/2023, 11:08
ಮಂಗಳೂರು(reporterkarnataka.com): ಸಾರ್ವಜನಿಕ ರಂಗದ ಪ್ರತಿಷ್ಠಿತ ಉದ್ಯಮ ಸುರತ್ಕಲ್ ಸಮೀಪದ ಎಂಆರ್ ಪಿಎಲ್ ಆಡಳಿತೇತರ ಶ್ರೇಣಿಯ 50 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿ ಪ್ರಕಟನೆ ಹೊರಡಿಸಿದೆ. ತನ್ನ ಎಂದಿನ ಚಾಳಿಯಂತೆ ಅರ್ಜಿಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಕರೆದಿದ್ದು, ಸ್ಥಳೀಯರಿಗೆ ಆದ್ಯತೆ ನಿರಾಕರಿಸಿದೆ.
ಸರಿಯಾಗಿ 2 ವರ್ಷಗಳ ಹಿಂದೆ, ಇದೇ ಶ್ರೇಣಿಯ 234 ಹುದ್ದೆಗಳಿಗೆ ನೇಮಕಾತಿ ಅಂತಿಮಗೊಂಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಎರಡು, ಕರ್ನಾಟಕ ರಾಜ್ಯದ ಎಂಟು ಜನರು ಮಾತ್ರ ನೇಮಕಾತಿಗೊಂಡಿದ್ದರು. ಉಳಿದವು ಉತ್ತರ ಭಾರತದವರ ಪಾಲಾಗಿತ್ತು. ಆ ನೇಮಕಾತಿಯ ಸಂದರ್ಭದಲ್ಲೂ ಡಿವೈಎಫ್ಐ ಸ್ಥಳೀಯರಿಗೆ ಆದ್ಯತೆ ಒದಗಿಸುವಂತೆ ಹೋರಾಟ ನಡೆಸಿತ್ತು. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರೂ ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಅಳವಡಿಸಿ ನೇಮಕಾತಿ ನಡೆಸುವಂತೆ ನೋಟೀಸು ಕೊಟ್ಟಿತ್ತು.
ಎಂಆರ್ ಪಿಎಲ್ ಈ ಒತ್ತಾಯ, ನೋಟೀಸುಗಳಿಗೆ ಮಾನ್ಯತೆ ನೀಡದೆ “ತಮ್ಮದು ಭಾರತ ಸರಕಾರದ ಅಡಿಯಲ್ಲಿರುವ ರಾಷ್ಟ್ರಮಟ್ಟದ ಸಂಸ್ಥೆ, ನಮ್ಮ ನೇಮಕಾತಿಯೂ ರಾಷ್ಟ್ರಮಟ್ಟದಲ್ಲೇ ನಡೆಯುತ್ತದೆ” ಎಂದು ಅಹಂಕಾರದಿಂದ ನೇಮಕಾತಿ ಪ್ರಕ್ರಿಯೆ ನಡೆಸಿತ್ತು. ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡು ಸ್ಥಳೀಯರನ್ನು ಪೂರ್ತಿ ಹೊರಗಿಟ್ಟದ್ದು ಬಹಿರಂಗಗೊಂಡಾಗ ತುಳುನಾಡಿನಾದ್ಯಂತ ದೊಡ್ಡ ಮಟ್ಟದ ಆಕ್ರೋಶ ಸ್ಪೋಟಗೊಂಡಿತ್ತು. ಕೊರೋನ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಬೀದಿಗಿಳಿಯಲು ಅವಕಾಶ ಇಲ್ಲದಿದ್ದರೂ ಸಾಮಾಜಿಕ ಜಾಲತಾಣ ಹೋರಾಟದ ವೇದಿಕೆಯಾಗಿತ್ತು. ಡಿವೈಎಫ್ಐ ಮನೆ ಮನೆ ಪ್ರತಿಭಟನೆಗೆ ಕರೆ ನೀಡಿದಾಗ 25 ಸಾವಿರಕ್ಕೂ ಹೆಚ್ಚು ಜನ ಸ್ವಯಂ ಪ್ರೇರಣೆಯಲ್ಲಿ ಈ ಹೋರಾಟದಲ್ಲಿ ಭಾಗಿಯಾಗಿದ್ದರು.
ಪ್ರತಿಭಟನೆಯ ಬಿಸಿಗೆ ತತ್ತರಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರುಗಳಾದ ಉಮಾನಾಥ ಕೋಟ್ಯಾನ್, ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಕಂಪೆನಿಯ ಆಡಳಿತದ ಪ್ರಮುಖರೊಂದಿಗೆ ಮಾತುಕತೆಯ ನಾಟಕ ನಡೆಸಿದರು. 234 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ರದ್ದುಗೊಂಡಿದೆ, ಸ್ಥಳೀಯ ಯುವಜನರಿಗೆ ಆದ್ಯತೆ ನೀಡಿ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಘೋಷಿಸಿದ್ದರು.
ಆದರೆ, ಆ ಘೋಷಣೆ ಸುಳ್ಳಾಗಿದೆ. ಅದೇ ಉತ್ತರ ಭಾರತದ 234 ಜನ ತುಳುನಾಡಿನ ವಿದ್ಯಾವಂತ ನಿರುದ್ಯೋಗಿಗಳ ಕಣ್ಣ ಮುಂದೆಯೇ ಎಂ ಆರ್ ಪಿಎಲ್ ನಲ್ಲಿ ಉದ್ಯೋಗಿಗಳಾಗಿ ಸೇರ್ಪಡೆಗೊಂಡರು.
ಈಗ ಮತ್ತೆ 50 ಹುದ್ದೆಗಳ ನೇಮಕಾತಿ. ಎಂತಹ ಉದ್ಯೋಗಿಗಳು ಅಂತೀರಿ !. ಸೇರ್ಪಡೆಗೊಂಡ ಪ್ರಥಮ ತಿಂಗಳಿನಿಂದಲೇ 80 ಸಾವಿರ ರೂಪಾಯಿವರಗೆ ವೇತನ ಇರುವ ಚಿನ್ನದಂತಹ ಹುದ್ದೆಗಳು. ನಮ್ಮದೇ ನೆಲ, ಜಲ ವಶಪಡಿಸಿಕೊಂಡು ನಿರ್ಮಾಣಗೊಂಡ, ನಮ್ಮ ನದಿ, ಕಡಲು, ವಾಯು, ಅಂತರ್ಜಲವನ್ನು ವಿಷಮಯಗೊಳಿಸಿದ ಕಂಪೆನಿಯಲ್ಲಿ ನಮ್ಮ ತುಳುನಾಡ ವಿದ್ಯಾವಂತ ಮಕ್ಕಳಿಗೆ ಪ್ರವೇಶ ಇಲ್ಲ. ನೇಮಕಾತಿಯಲ್ಲಿ ಆದ್ಯತೆ ಇಲ್ಲ. ಇದೇ ಕಂಪೆನಿಯ ದೇಶದ ಉಳಿದೆಡೆಯ ಘಟಕಗಳಲ್ಲಿ ಆ ರಾಜ್ಯದ ಸ್ಥಳೀಯರಿಗೆ ಮೀಸಲಾತಿ ಇದೆ. ಕರ್ನಾಟಕದ ಮಂಗಳೂರಿನಲ್ಲಿ ಮಾತ್ರ ಇಲ್ಲ. ಯಾಕೆ ? ಅಂತ ಕೇಳಲು ತುಳುನಾಡಿನ ಸಂಸದ, ಶಾಸಕರುಗಳಿಗೆ ಪುರುಸೊತ್ತು ಇಲ್ಲ.
ಸಂಸದ ನಳಿನ್ ಕುಮಾರ್ ಕಟೀಲ್, 234 ಉದ್ಯೋಗ ನೇಮಕಾತಿಯಲ್ಲಿ ವಂಚಿಸಿದರೂ ಮತ್ತೊಮ್ಮೆ ಭರ್ಜರಿ ಬಹುಮತದಿಂದ ಗೆದ್ದಿರುವ ಉಮಾನಾಥ ಕೋಟ್ಯಾನ್, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಹರೀಶ್ ಪೂಂಜಾರವರಿಗೆ ಈ ಹಿಂದಿನ ನೇಮಕಾತಿಗಳಲ್ಲಿ ನ್ಯಾಯಕೊಡಿಸದೇ ಇದ್ದದಕ್ಕೆ, ಮಾತು ತಪ್ಪಿ ವಂಚಿಸಿದ್ದಕ್ಕೆ, ಇಂತಹ ವಂಚನೆಯ ನಂತರವೂ ತಮ್ಮನ್ನು ಗೆಲ್ಲಿಸಿದ ಜನರ ಮುಂದೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಒಂದು ಅವಕಾಶ ಸಿಕ್ಕಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ. ಅದೇ ಸರಕಾರದ ಅಧೀನದಲ್ಲಿ ಇರುವ ಎಂಆರ್ ಪಿಎಲ್ ನಲ್ಲಿ ಈಗ ನಡೆಯುತ್ತಿರುವ ಈ ಅನ್ಯಾಯದ ನೇಮಕಾತಿ ಪ್ರಕ್ರಿಯೆಗೆ ಆರಂಭದಲ್ಲೇ ಬ್ರೇಕ್ ಹಾಕಿ. ಸ್ಥಳೀಯರಿಗೆ ಆದ್ಯತೆ ಒದಗಿಸಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ತಾಕೀತು ಮಾಡಿ. 50 ಹುದ್ದೆಗಳಲ್ಲಿ ಕನಿಷ್ಟ 40 ಹುದ್ದೆಗಳಾದರೂ ಸ್ಥಳೀಯರಿಗೆ ಮೀಸಲಾಗಬೇಕು.
ಡಿವೈಎಫ್ಐ ಮತ್ತೆ ಹೋರಾಟ ನಡೆಸಲಿದೆ. ತುಳುನಾಡು, ಕರುನಾಡಿನ ಯುವಜನರು ಈ ಅನ್ಯಾಯದ ವಿರುದ್ದ ಪ್ರಬಲವಾಗಿ ಧ್ವನಿ ಎತ್ತಬೇಕಿದೆ. ನಮ್ಮ ನೆಲದ ಉದ್ಯೋಗಗಳಲ್ಲಿ ನಮಗೆ ಸಿಂಹಪಾಲು ದೊರಕಲೇಬೇಕು. ಕಂಪೆನಿಯು ಈಗಿನ ಅರ್ಜಿ ಆಹ್ವಾನ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು. ಸ್ಥಳೀಯರಿಗೆ ಆದ್ಯತೆಯ ವಿಚಾರ ಇತ್ಯರ್ಥವಾಗದೆ ನೇಮಕಾತಿ ಪ್ರಕ್ರಿಯೆ ನಡೆಯಬಾರದು ಎಂದು ಡಿವೈಎಫ್ ಐ ಪ್ರಕಟಣೆಯಲ್ಲಿ ತಿಳಿಸಿದೆ.