ಇತ್ತೀಚಿನ ಸುದ್ದಿ
ಬೆಂಗಳೂರಿನಲ್ಲಿ ಭಾರೀ ಗಾಳಿ- ಮಳೆ: ಯುವತಿ ಸಾವು; ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ
21/05/2023, 19:07
ಬೆಂಗಳೂರು(reporterkarnataka.com): ರಾಜಧಾನಿ ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ.
ಬಿರುಗಾಳಿ ಮಳೆಗೆ ತೀವ್ರ ಅಸ್ವಸ್ಥರಾದ ಆಂಧ್ರ ಪ್ರದೇಶ ಮೂಲದ ಭಾನುಲೇಖಾ ಅವರನ್ನು ನಗರದ ಸೈಂಟ್ ಮಾರ್ಥಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ವಿಳಂಬವಾಗಿ ಯುವತಿ ಸಾವನ್ನಪ್ಪಿದರು ಎನ್ನಲಾಗಿದೆ. ಭಾನುರೇಖಾ ಅವರು ಇನ್ಫೋಸಿಸ್ ಉದ್ಯೋಗಿಯಾಗಿದ್ದಾರೆ. ಅವಘಡ ನಡೆದ ಸ್ಥಳ ಹಾಗೂ ಸೈಂಟ್ ಮಾರ್ಥಸ್ ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಬಾಡಿಗೆ ವಾಹನ ಪಡೆದು ಭಾನುರೇಖಾ ಸಹಿತ 7 ಮಂದಿ ಬೆಂಗಳೂರು ನಗರ ನೋಡಲು ಬಂದಿದ್ದರು. ಮಳೆಯ ಅಂದಾಜು ಇಲ್ಲದ ಚಾಲಕ ಅಂಡರ್ ಪಾಸ್ ಒಳಗೆ ಪ್ರವೇಶಿಸಿದ್ದ. ಮಳೆ ನೀರಿನ ಒತ್ತಡದಿಂದ ಕಾರಿನ ಗಾಜು ತೆರೆದುಕೊಳ್ಳಲಿಲ್ಲ. ಭಾನುರೇಖಾ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ. ಉಳಿದ 6 ಮಂದಿ ಸುರಕ್ಷಿತರಾಗಿದ್ದಾರೆ ಎಂದರು.
ಮೃತ ಯುವತಿ ಕುಟುಂಬಕ್ಕೆ ಮುಖ್ಯಮಂತ್ರಿ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.