ಇತ್ತೀಚಿನ ಸುದ್ದಿ
ಕಂಬಳಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ; ನಿಷೇಧದ ಭೀತಿ ಮರೆಯಾಗಿದೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
18/05/2023, 23:34
ನವದೆಹಲಿ(reporterkarnataka.com): ಕರಾವಳಿಯ ಹೆಮ್ಮೆಯ ಸಂಸ್ಕೃತಿಯ ಪ್ರತೀಕವಾಗಿರುವ ಐತಿಹಾಸಿಕ ಜಾನಪದ ಕ್ರೀಡೆ ಕಂಬಳಕ್ಕಿದ್ದ ನಿಷೇಧದ ತೂಗುಗತ್ತಿ ಸುಪ್ರೀಂ ಕೋರ್ಟಿನ ಮಹತ್ವದ ತೀರ್ಪಿನ ಮೂಲಕ ನಿವಾರಣೆಯಾಗಿದೆ. ಈ ಮಹತ್ವದ ತೀರ್ಪನ್ನು ಸ್ವಾಗತಿಸುತ್ತೇನೆ. ತುಳುನಾಡಿನ ಜನತೆಯ ಕೆಚ್ಚೆದೆಯ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಮೂಲಕ ನ್ಯಾಯ ದೊರಕಿದೆ ಎಂದು ಮಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ
ಕಂಬಳದ ನಿಷೇಧದ ಬಗೆಗೆ ಪ್ರಾಣಿ ದಯಾ ಸಂಘಗಳ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದ್ದು, ಈ ಹಿಂದೆ ಕರ್ನಾಟಕ ಸರಕಾರ ಪ್ರಾಣಿ ಹಿಂಸಾ ಕಾಯ್ದೆಗೆ ತಂದ ತಿದ್ದುಪಡಿಯನ್ನು ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ ಎತ್ತಿ ಹಿಡಿದಿದೆ. ಇದರಿಂದ ನಮ್ಮ ಹೆಮ್ಮೆಯ ಕಂಬಳವನ್ನು ಸುಸೂತ್ರವಾಗಿ ನಡೆಸಲು ಹೆಚ್ಚಿನ ಶಕ್ತಿ ಬಂದಂತಾಗಿದೆ. ಈ ಹೋರಾಟದಲ್ಲಿ ಸಹಕರಿಸಿದ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ, ಎಲ್ಲಾ ಜನಪ್ರತಿನಿಧಿಗಳಿಗೆ, ಜಿಲ್ಲಾ ಕಂಬಳ ಸಮಿತಿಗೆ, ಎಲ್ಲಾ ಕಂಬಳ ಆಯೋಜಕರುಗಳಿಗೆ, ಕಂಬಳದ ಕೋಣಗಳ ಮಾಲೀಕರಿಗೆ, ಕಂಬಳದ ಉಳಿವಿಗಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಅಭಿನಂದನೆ ಹಾಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.