ಇತ್ತೀಚಿನ ಸುದ್ದಿ
ಬಸ್ ಇದ್ರೆ ಸಾಕು, ಬಸ್ ಸ್ಟಾಂಡ್ ಯಾಕೆ ಬೇಕು?: ಮಾಜಿ ಚೀಫ್ ಮಿನಿಸ್ಟರ್, ಹಾಲಿ ಪವರ್ ಮಿನಿಸ್ಟರ್ ತವರಿನ ದುಸ್ಥಿತಿ!; ಪ್ರಯಾಣಿಕರದ್ದು ಅಧೋಗತಿ!!
22/04/2023, 11:52
ಕಾರ್ಕಳ(reporterkarnataka.com): ಅದು ಅಂತಿಥ ಕ್ಷೇತ್ರವಲ್ಲ. ಧಾರ್ಮಿಕವಾಗಿ, ಐತಿಹಾಸಿಕವಾಗಿ ಬಹಳ ಮಹತ್ವ ಪಡೆದ ಕ್ಷೇತ್ರ. ಸ್ವಾತಂತ್ರ್ಯೋತ್ತರದಲ್ಲಿ ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ಕೊಟ್ಟ ಕ್ಷೇತ್ರ. ಹಾಲಿ ಪವರ್ ಮಿನಿಸ್ಟರ್ ಕೂಡ ಇಲ್ಲಿಯವರೇ.
ಈಗ ನಿಮಗೆಲ್ಲ ಗೊತ್ತಾಗಬಹುದು ಇದು ಜೈನರಾಳ್ವಿಕೆಗೊಳಪಟ್ಟ ಕಾರ್ಕಳದ ಕಥೆ ಎಂದು. ಕಾರ್ಕಳ ಬಂಡೆಕಲ್ಲಿಗೆ ಪ್ರಸಿದ್ಧ. ಇಲ್ಲಿನ ಗೋಮಟೇಶ್ವರ ಮೂರ್ತಿ ವಿಶ್ವಮಾನ್ಯ. ಬಸದಿಗಳ ತವರು. ಆದರೆ ಇಂದಿಗೂ ಇಲ್ಲಿ ಒಂದು ನೆಟ್ಟಗಿನ ಸರ್ವಿಸ್ ಬಸ್ ನಿಲ್ದಾಣವಿಲ್ಲ.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಸ್ಥಳೀಯ ಶಾಸಕರಾಗಿದ್ದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆದಿದೆ. ಆದರೆ ನಂತರದ ವರ್ಷಗಳಲ್ಲಿ ಹೇಳಿಕೊಳ್ಳುವ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಬೇಸಿಗೆ ಕಾಲದಲ್ಲಿ ಸಿಕ್ಕಾಪಟ್ಟೆ ನೀರಿನ ಸಮಸ್ಯೆ ಇದೆ. ಖಾಸಗಿ ಬಸ್ ಗಳ ಓಡಾಟದ ಈ ಪ್ರದೇಶದಲ್ಲಿ ಗ್ರಾಮೀಣ ಭಾಗವನ್ನು ಸಂಪರ್ಕಿಸಲು ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಆದರೆ ಅಕ್ರಮ ಗಣಿಗಾರಿಕೆ, ಬಂಡೆ ಹೊಡೆಯುವುದು ನಿರಂತರವಾಗಿ ನಡೆಯುತ್ತಲೇ ಇದೆ.
ಬಸ್ ನಿಲ್ದಾಣದ ವಿಷಯಕ್ಕೆ ಬಂದರೆ, ಹಳೆಯ ಕಟ್ಟಡದ ನಡುವಿನಲ್ಲಿ ಸಿಗುವ ಖಾಲಿ ಜಾಗದಲ್ಲಿ ಬೇರೆ ಬೇರೆ ಊರುಗಳಿಗೆ ಹೋಗುವ ಬಸ್ ಗಳು ಬಂದು ಹೋಗುತ್ತವೆ. ಬಸ್ ಸ್ಟಾಂಡ್ ಕಟ್ಟಡದ ಕೆಳಗಡೆ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಎಲ್ಲೂ ಆಸನದ ವ್ಯವಸ್ಥೆ ಇಲ್ಲ. ಕಟ್ಟಡದ ಒಂದು ಮೂಲೆಯ ಮಾಳಿಗೆ ಮೇಲೆ ಗ್ಯಾಲರಿ ಮಾದರಿಯಲ್ಲಿ 10-15 ಬೆಂಚುಗಳನ್ನು ಹಾಕಲಾಗಿದೆ. ಮಂಗಳೂರು, ಉಡುಪಿ, ಶಿವಮೊಗ್ಗ, ತೀರ್ಥಹಳ್ಳಿ, ಶೃಂಗೇರಿ, ಎನ್. ಆರ್. ಪುರ ಸೇರಿದಂತೆ ಎಲ್ಲ ಊರುಗಳಿಗೆ ಹೋಗುವ ಪ್ರಯಾಣಿಕರು ಈ ಗ್ಯಾಲರಿ ಮೇಲೆಯೇ ತಂಗಬೇಕು. ಆದರೆ ಇಲ್ಲಿ ಶಾಸಕರಾದವರಿಗೆ ತಮ್ಮ ಊರಿನ ಜನತೆಗೆ ಒಂದು ಒಳ್ಳೆಯ ಬಸ್ ಸ್ಟಾಂಡ್ ಬೇಕು ಅಂತ ಇದುವರೆಗೆ ಅನಿಸಲೇ ಇಲ್ಲ. ಯಾಕೆಂದರೆ ಅವರ್ಯಾರೂ ಇಲ್ಲಿಗೆ ಬರೋದಿಲ್ಲ. ಅವರು ಐಷಾರಾಮಿ ಕಾರಿನಲ್ಲಿ ಸುತ್ತುತ್ತಾರೆ. ವಿಮಾನದಲ್ಲಿ ಹಾರುತ್ತಾರೆ. ಪವರ್ ಮಿನಿಸ್ಟರ್ ಸುನಿಲ್ ಕುಮಾರ್ ಕೂಡ 5 ವರ್ಷದಲ್ಲಿ ಈ ಕುರಿತು ತಲೆ ಕೆಡಿಸಲೇ ಇಲ್ಲ.