ಇತ್ತೀಚಿನ ಸುದ್ದಿ
ಕಾಂಗ್ರೆಸ್ ಮುಖಂಡನ ಮಂಗಳೂರು ನಿವಾಸ, ಕಚೇರಿ ಸೇರಿದಂತೆ ರಾಜ್ಯದ ಹಲವೆಡೆ ಐಟಿ ದಾಳಿ: ಬಿಜೆಪಿ ಕುಮ್ಮಕ್ಕು ಆರೋಪ
16/04/2023, 12:42
ಮಂಗಳೂರು(reporterkarnataka.com); ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ವಿವೇಕ್ ರಾಜ್ ಪೂಜಾರಿ ಅವರ ಮಂಗಳೂರಿನ ಎರಡು ನಿವಾಸ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭಾನುವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.
ವಿವೇಕ್ ರಾಜ್ ಪೂಜಾರಿಗೆ ಸೇರಿದ ನಗರದ ಮಣ್ಣಗುಡ್ಡೆ ಮತ್ತು ಅತ್ತಾವರಲ್ಲಿರುವ ಎರಡು ಮನೆಗೆ ಹಾಗೂ ವಿವೇಕನಗರದಲ್ಲಿರುವ ಕಚೇರಿ ಮೇಲೆ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಳಗ್ಗೆ 7 ಗಙಟೆಗೆ ದಾಳಿ ನಡೆದಿದೆ
ಬಿಜೆಪಿಗರ ಕುಮ್ಮಕ್ಕಿನಿಂದ ನಡೆದ ಐಟಿ ದಾಳಿಯಾಗಿದೆ. ನನ್ನ ವ್ಯವಹಾರದ ದಾಖಲೆಪತ್ರಗಳೆಲ್ಲವೂ ಸಮರ್ಪಕವಾಗಿದೆ. ನಾನು ತೆರಿಗೆ ವಂಚಿಸಿ ವ್ಯವಹಾರ ಮಾಡಿಲ್ಲ.ದಾಳಿಯಲ್ಲಿ ಐಟಿ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ ಎಂದು ವಿವೇಕ್ ರಾಜ್ ಪೂಜಾರಿ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ಪರ್ಧಿಸಿರುವ ಚಿಕ್ಕಮಗಳೂರು ಕ್ಷೇತ್ರದಲ್ಲಿ ನನ್ನನ್ನು ಕಾಂಗ್ರೆಸ್ ಹೈಕಮಾಂಡ್ ಉಸ್ತುವಾರಿ ಜವಾಬ್ದಾರಿ ವಹಿಸಿದೆ. ಅದರಂತೆ ನಾನು ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಕ್ಷದ ಪರ ಬಿರುಸಿನ ಪ್ರಚಾರ ಮಾಡುತ್ತಿದ್ದೇನೆ. ಮನೆ ಮನೆಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಿಸುತ್ತಿದ್ದೇನೆ. ಅಲ್ಲದೆ ಬಿಜೆಪಿ ಕಾರ್ಯಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದೇನೆ. ಇದರಿಂದ ಅಸಮಾಧಾನಗೊಂಡ ಬಿಜೆಪಿ ಅಭ್ಯರ್ಥಿಯು ಆದಾಯ ತೆರಿಗೆ ಇಲಾಖೆಯ ಮೇಲೆ ಒತ್ತಡ ಹೇರಿ ದಾಳಿ ಮಾಡಿಸಿದ್ದಾರೆ ಎಂದು ವಿವೇಕ್ ರಾಜ್ ಆರೋಪಿಸಿದ್ದಾರೆ.