ಇತ್ತೀಚಿನ ಸುದ್ದಿ
ವಿಧಾನ ಸಭೆ ಚುನಾವಣೆ: ಮಾಜಿ ಸಿಎಂ ಅವರೇ ಬಿಜೆಪಿಯ ಮೊದಲ ರೆಬೆಲ್ ಅಭ್ಯರ್ಥಿ!; ಜಗದೀಶ ಶೆಟ್ಟರ್ ಹೇಳಿದ್ದೇನು?
11/04/2023, 20:01

ಹುಬ್ಬಳ್ಳಿ(reporterkarnataka.com); ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದರೆ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಬಿಜೆಪಿ ಟಿಕೆಟ್ ಕೊಡದಿದ್ದರೂ ಸ್ಪರ್ಧಿಸಿಯೇ ಸಿದ್ದ ಎಂದು ಕೇಸರಿ ಪಾಳಯಕ್ಕೆ ಸೆಡ್ಡು ಹೊಡೆದಿದ್ದಾರೆ.
ಮೊನ್ನೆಯವರೆಗೂ ನನಗೆ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು. ನಿನ್ನೆ ನಂಗೆ ಹೈಕಮಾಂಡ್ ನಿಂದ ಕರೆ ಮಾಡಿ ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಹೇಳಲಾಯಿತು. ನಾನು ಅದನ್ನು ವಿರೋಧಿಸಿದೆ ಎಂದು 6 ಬಾರಿ ಶಾಸಕರಾದ ಶೆಟ್ಡರ್ ಮಾಧ್ಯಮದ ಮುಂದೆ ಅಳಲು ವ್ಯಕ್ತಪಡಿಸಿದರು.
ನನ್ನ ರಾಜಕೀಯ ಇತಿಹಾಸದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲ. ನನ್ನ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲ. 2018ರ ಚುನಾವಣೆಯಲ್ಲೂ 21 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದೇನೆ. ಪ್ರತಿ ಬಾರಿಯ ಚುನಾವಣೆಯಲ್ಲೂ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ್ದೇನೆ. ನನ್ನ ಕ್ಷೇತ್ರದಲ್ಲಿ ಮಾಡಲು ಇನ್ನಷ್ಟು ಕೆಲಸವಿದೆ. ಇನ್ನೊಂದು ಬಾರಿ ತನಗೆ ಅವಕಾಶ ನೀಡಬೇಕೆಂದು ಕೋರಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ನುಡಿದರು.
ನಾನು ಈಗಾಗಲೇ ಚುನಾವಣೆಗೆ ಸಿದ್ದತೆ ಮಾಡಿದ್ದೇನೆ. 3 ತಿಂಗಳಿನಿಂದ ಎಲೆಕ್ಷನ್ ಸಿದ್ದತೆ ನಡೆದಿದ್ದೇನೆ. ಬಿಜೆಪಿ ಟಿಕೆಟ್ ಸಿಗದಿದ್ದರೂ ನಾನು ಸ್ಪರ್ಧಿಸಿಯೇ ಸಿದ್ಧ ಎಂದು ಹೇಳಿದ್ದಾರೆ.