ಇತ್ತೀಚಿನ ಸುದ್ದಿ
ಏಪ್ರಿಲ್ 8: ಪುತ್ತೂರಿನ ಸೌಗಂಧಿಕಾದಲ್ಲಿ ‘ಮುಖಗಳು’ ಚಿತ್ರಕಲಾ ಪ್ರದರ್ಶನ ಅನಾವರಣ
05/04/2023, 19:07
ಮಂಗಳೂರು(reporterkarnataka.com): ಪುತ್ತೂರಿನ ಸಮೀಪದಲ್ಲಿರುವ ಸೌಗಂಧಿಕಾದಲ್ಲಿ ಈ ವರ್ಷದ ವಸಂತಕಾಲದ ಚಿತ್ರಕಲಾ ಪ್ರದರ್ಶನ ‘ಮುಖಗಳು’ ಏಪ್ರಿಲ್ 8ರಂದು ಶನಿವಾರ ಸಂಜೆ ಅನಾವರಣಗೊಳ್ಳಲಿದೆ.
ಬೆಂಗಳೂರಿನ ಯುವ ಕಲಾವಿದರಾದ ಆದಿತ್ಯ ಸದಾಶಿವ ಮೂರ್ತಿಯವರು ಜಲ ವರ್ಣದಿಂದ “wash method” ನಲ್ಲಿ ರಚಿಸಿರುವ ಕಲಾಕೃತಿಗಳು”ಮುಖಗಳು” ಎನ್ನುವ ಶೀರ್ಷಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ. ಈ ಕಲಾಕೃತಿಗಳು ಭಾರತೀಯ ಮತ್ತು ಆಫ್ರಿಕಾದ ಬುಡಕಟ್ಟು ಜನಾಂಗದ ಜನಪದ ಶೈಲಿಗಳ ಮುಖಗಳ ಅಧ್ಯಯನದ ಬಳಿಕ ರಚಿಸಿರುವ ಕಲಾ ಕೃತಿಗಳಾಗಿರುತ್ತದೆ. ವಿಶ್ವ ರಂಗಭೂಮಿಯ ಸಂಭ್ರಮ ಆಚರಣೆಯ ಪ್ರಯುಕ್ತ ನಡೆಯಲಿರುವ ಈ ಕಲಾ ಪ್ರದರ್ಶನವು ಮುಖಗಳ ಭಾವನೆಗಳ ಬಣ್ಣಗಳ ಜೊತೆಗಿನ ನಮ್ಮೊಂದಿನ ರಂಗ ಬಾಂಧವ್ಯದ ಸೊಗಸನ್ನು ಹೆಚ್ಚಿಸುವಂಥದ್ದು.
1996ರಲ್ಲಿ ಬೆಂಗಳೂರು ಮಹಾನಗರಿಯಲ್ಲಿ ಜನಿಸಿರುವ ಆದಿತ್ಯ ಸದಾಶಿವಮೂರ್ತಿಯವರು ಬಾಲ್ಯದಲ್ಲಿ ತನ್ನ ತಂದೆ ಹಿರಿಯ ಕಲಾವಿದರಾದ ಎಂ. ಎಸ್.ಮೂರ್ತಿ ಯವರು ಸ್ಟುಡಿಯೋದಲ್ಲಿ ರಚಿಸುತ್ತಿದ್ದ ರೇಖೆಗಳನ್ನು, ತೈಲ ವರ್ಣ,ಜಲ ವರ್ಣ ಕಲಾಕೃತಿಗಳನ್ನು ಬಿತ್ತಿ ರೂಹು ಗಳನ್ನು ನೋಡುತ್ತಾ ಗೆರೆಗಳನ್ನು ಎಳೆಯುತ್ತಾ ಚಿತ್ರಕಲೆ ಕಲಿಯಲಾರಂಭಿಸಿದವರು. ನಂತರ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಿಂದ visual and communication ವಿಷಯದಲ್ಲಿ ಪದವಿ ಪಡೆದವರು. ನಂತರ ಇವರು ಹಲವು ವಿಶೇಷವಾದ ಸಾಕ್ಷ್ಯ ಚಿತ್ರಗಳನ್ನು ರಚಿಸಿ ಗಮನ ಸೆಳೆದವರು. ಇವರು ರಚಿಸಿರುವ ಕೆಲವು ಸಾಕ್ಷ್ಯ ಚಿತ್ರಗಳು ರಾಷ್ಟ್ರೀಯ ಮಟ್ಟದ ಕಿರು ಚಿತ್ರ ಪ್ರದರ್ಶನಗಳ ಉತ್ಸವದಲ್ಲಿ ಪ್ರದರ್ಶನಗೊಂಡಿರುವುದು ಕಿರಿಯ ವಯಸ್ಸಿನ ಹುಡುಗನ ದೊಡ್ಡ ಸಾಧನೆಗೆ ಸಾಕ್ಷಿ.ಇವರು ಇತ್ತೀಚೆಗೆ “ರೂಪ ಮತ್ತು ಆಕಾರಗಳು”(shapes &forms )ಎನ್ನುವ ಏಕವ್ಯಕ್ತಿ ಕಲಾ ಪ್ರದರ್ಶನವನ್ನು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಸಿರುತ್ತಾರೆ. ಕಲಾ ಮಾಧ್ಯಮ ಅಭ್ಯಾಸ ಮಾಡುವವರಿಗಾಗಿ ಇವರು ಜಗತ್ಪ್ರಸಿದ್ಧ ಕಲಾವಿದ ರ ಕುರಿತು ಹೊರತಂದಿರುವ ಪುಸ್ತಕ ಒಂದು ಅಮೂಲ್ಯವಾದ ಕೃತಿ.
ಏಪ್ರಿಲ್ 8ರಿಂದ ಇಪ್ಪತ್ತರವರೆಗೆ ಸೌಗಂಧಿಕಾದಲ್ಲಿ ನಡೆಯಲಿರುವ ಈ ವಿಶೇಷವಾದ ಕಲಾ ಪ್ರದರ್ಶನಕ್ಕೆ ಪೂರ್ವಾಹ್ನ ಹತ್ತರಿಂದ ಮುಸ್ಸಂಜೆ ಆರರ ತನಕ ನೀವು ಭೇಟಿ ನೀಡಬಹುದು.
ಸಂಪರ್ಕ. 9900409380. 8861029163.